ನವದೆಹಲಿ, ಮಾ.20 (DaijiworldNews/PY): "ಶಿಕ್ಷಣ ಹಾಗೂ ಉದ್ಯೋಗದಲ್ಲಿ ಜಾತಿವಾರು ಮೀಸಲು ಇನ್ನು ಎಷ್ಟು ತಲೆಮಾರುಗಳವರೆಗೆ ಮುಂದುವರೆಯಬೇಕು?" ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮರಾಠ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೀಸಲಾತಿಗೆ ಇರುವ ಶೇ.50ರಷ್ಟು ಮಿತಿಯನ್ನು ತೆಗೆದುಹಾಕಿದರೆ ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
"ಶೇ.50ರಷ್ಟು ಮೀಸಲಾತಿ ಬೇಡ ಎನ್ನುವುದಾದರೆ ಸಮಾನತೆ ಏನು ಅರ್ಥ ಉಳಿಯುತ್ತದೆ?. ಹಾಗಾದರೆ ಅಸಮಾನತೆ ಏನು?. ಮೀಸಲಾತಿ ಇನ್ನೆಷ್ಟು ತಲೆಮಾರುಗಳವರೆಗೆ ಮುಂದುವರೆಯಬೇಕು?" ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಕೇಳಿದೆ.
"ಬದಲಾದ ವೇಳೆಯಲ್ಲಿ ಮಂಡನ್ ತೀರ್ಪನ್ನು ಪರಿಶೀಲನೆ ಮಾಡುವ ಅವಶ್ಯಕತೆ ಇದೆ" ಎಂದು ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಸುಪ್ರೀಂ ಹೇಳಿದೆ.
ರೋಹ್ಟಗಿ ಅವರು ಮರಾಠರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಕಾನೂನಿನ ಪರವಾಗಿ ವಾದಿಸಿದ್ದು, "ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡುವಂತ ಕೇಂದ್ರ ಸರ್ಕಾರದ ತೀರ್ಮಾನವು ಶೇ.50ರ ಮಿತಿಯನ್ನು ಉಲ್ಲಂಘನೆ ಮಾಡಿದೆ" ಎಂದಿದ್ದಾರೆ.
"ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ರಾಜ್ಯಗಳು ಹಲವಾರು ಪ್ರಯೋಜನಕಾರಿಯಾದ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಆದರೆ, ಅಭಿವೃದ್ದಿ ಕಾರ್ಯ ಆಗಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ದಿ ಆಗಿದೆ ಎನ್ನುವ ವಿಚಾರವನ್ನು ಒಪ್ಪ ಬೇಕಾಗುತ್ತದೆ "ಎಂದು ಸುಪ್ರೀಂಕೋರ್ಟ್ ತಿಳಿಸಿದೆ.