ಕೋಲ್ಕತ್ತಾ, ಮಾ.20 (DaijiworldNews/MB) : ''ಶುಕ್ರವಾರ ಮಾರ್ಚ್ 19 ರಂದು 55 ನಿಮಿಷ ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಆಪ್ಗಳು ಸ್ಥಗಿತವಾಗಿದೆ, ಆದರೆ ಬಂಗಾಳದಲ್ಲಿ 55 ವರ್ಷದಿಂದ ಅಭಿವೃದ್ದಿಯೇ ಸ್ಥಗಿತವಾಗಿದೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಎಡ ಪಕ್ಷ, ಟಿಎಂಸಿ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಇನ್ನಷ್ಟು ಬಿರುಸುಗೊಂಡಿದೆ. ಬಿಜೆಪಿ ಸರ್ಕಾರದ ವಿರುದ್ದ ಟಿಎಂಸಿ ಹಾಗೂ ಟಿಎಂಸಿ ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸುತಲೇ ಇದೆ. ಶನಿವಾರ ಖರಗ್ಪುರದಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ''ಪಶ್ಷಿಮ ಬಂಗಾಳದಲ್ಲಿ ಅಭಿವೃದ್ಧಿಯನ್ನು ನಿಂತ ನೀರಾಗಿಸುವಲ್ಲಿ ಈ ಹಿಂದಿನ ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ ಸರ್ಕಾರ ಮಹತ್ವದ ಪಾತ್ರ ವಹಿಸಿವೆ. ಜನರು ಅಭಿವೃದ್ಧಿಯ ಕನಸು ಕಾಣುವುದನ್ನು ಕೂಡಾ ಈ ಸರ್ಕಾರಗಳು ತಡೆಯುವಷ್ಟು ದುಸ್ಥಿತಿ ತಲುಪಿದೆ'' ಎಂದು ಹೇಳಿದರು.
''ಕಳೆದ 70 ವರ್ಷಗಳಿಂದ ಬೇರೆ ಪಕ್ಷಗಳಿಗೆ ನೀವು ರಾಜ್ಯದಲ್ಲಿ ಅವಕಾಶ ನೀಡಿದ್ದೀರಿ. ಈ ಬಾರಿ ನಮಗೆ ಅವಕಾಶ ನೀಡಿ, ಪಶ್ಚಿಮ ಬಂಗಾಳ ಅಭಿವೃದ್ಧಿಗೆ 5 ವರ್ಷ ಅವಕಾಶ ನೀಡಿ. ನಾವು ನಮ್ಮ ಜೀವನವನ್ನೇ ನಿಮ್ಮ ಅಭಿವೃದ್ಧಿಗೆ ಮೀಸಲಾಗಿಡುತ್ತೇವೆ. ಬಂಗಾಳದಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಕೊನೆ ಹಾಡಲು ಬಿಜೆಪಿ ಬದ್ದವಾಗಿದೆ'' ಎಂದು ಪ್ರಧಾನಿ ಭರವಸೆ ನೀಡಿದರು.
ಇನ್ನು, ''ಬಂಗಾಳದ ಅಭಿವೃದ್ದಿ ಸಹಿಸದ ಟಿಎಂಸಿ ನಾಯಕರು ಬಿಜೆಪಿ ನಾಯಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ'' ಎಂದು ಆರೋಪ ಕೂಡಾ ಮಾಡಿದರು.