ಮೈಸೂರು, ಮಾ.20 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ಪ್ರಕರಣ ಮತ್ತೆ ಏರಿಕೆ ಕಾಣುತ್ತಿರುವ ಮಧ್ಯೆ ವಿಜ್ಞಾನ ಲೋಕಕ್ಕೆ ಸವಾಲಾಗಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ವ್ಯಕ್ತಿಯೋರ್ವ ಮೃತಪಟ್ಟು 36 ದಿನ ಕಳೆದರೂ ಮೃತದೇಹದಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ.

2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಡಿ ಕೋಟೆ ತಾಲೂಕಿನ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅಧಿಕಾರಿಗಳು ತಿಳಿಸಿದ್ದರು. ಆದರೆ ಅವರು ಮನೆಯಲ್ಲಿಯೇ ಇರುತ್ತೇನೆ ಎಂದು ಹೇಳಿ ಅಧಿಕಾರಿಗಳ ಸಲಹೆಗೆ ಕಿವಿಗೊಡದೆ ಮನೆಗೆ ವಾಪಾಸ್ ಹೋಗಿದ್ದರು. ಬಳಿಕ ಈ ಸೋಂಕಿತ ವ್ಯಕ್ತಿಯ ಹುಡುಕಾಟ ನಡೆಸಿದಾಗ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಆರೋಗ್ಯಾಧಿಕಾರಿಗಳಿಗೆ ತಿಳಿದು ಬಂದಿತ್ತು. ಆದರೆ ಅಷ್ಟರಲ್ಲಿ ಈ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದಿಲ್ಲದ ಕುಟುಂಬಸ್ಥರು ಅಂತಿಮ ಕ್ರಿಯೆಯನ್ನೂ ಮಾಡಿ ಆಗಿತ್ತು.
ಇದು ಆತ್ಮಹತ್ಯೆ ಪ್ರಕರಣವಾದ ಕಾರಣ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಈ ಸೋಂಕಿತ ವ್ಯಕ್ತಿ ಮೃತಪಟ್ಟ 16 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಇದರ ವರದಿಯು 20 ದಿನಗಳ ಬಳಿಕ ಸಿಎಫ್ಟಿಆರ್ಐ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ತಲುಪಿದೆ.
ಈ ವ್ಯಕ್ತಿ ಸತ್ತು ಅದಾಗಲೇ 36 ದಿನಗಳಾಗಿದ್ದರೂ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ವಿಜ್ಞಾನಿಗಳು ಅಧ್ಯಯನ ನಡೆಸಲು ಸಿದ್ದರಾಗಿದ್ದಾರೆ. ಈ ಬಗ್ಗೆ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಮತ್ತು ಸಿಎಸ್ಐಆರ್ ವಿಜ್ಞಾನಿಗಳ ತಂಡ ಅಧ್ಯಯನ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಎಫ್ಟಿಆರ್ಐ ಕೋವಿಡ್ -19 ಪರೀಕ್ಷಾ ಕೇಂದ್ರದ ಉಸ್ತುವಾರಿ ಸಂಯೋಜಕರಾದ ಡಾ. ಪಿ ವಿ ರವೀಂದ್ರ ಅವರು, ''ಸಾಕಷ್ಟು ಬಾರಿ ಪರೀಕ್ಷೆ ನಡೆಸಲಾಗಿದ್ದು ಈಗ ಆರ್ಟಿ-ಪಿಸಿಆರ್ ವಿಧಾನದಲ್ಲಿಯೂ ಪರೀಕ್ಷೆ ನಡೆಸಲಾಗಿದೆ. ಎಷ್ಟು ಬಾರಿ ಪರೀಕ್ಷೆ ನಡೆಸಿದರೂ ಕೊರೊನಾ ಪಾಸಿಟಿವ್ ಎಂದೇ ಬರುತ್ತಿದೆ. ಇದರಲ್ಲೂ ಆಶ್ಚರ್ಯವೆಂದರೆ ವ್ಯಕ್ತಿಯ ಮೂಗಿನ ಸ್ವ್ಯಾಬ್, ಕರುಳು ಮತ್ತು ಯಕೃತ್ತಿನ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದೆ. ಆದರೆ ಶ್ವಾಸಕೋಶ ಮತ್ತು ಮೂತ್ರಪಿಂಡದಲ್ಲಿ ಪಾಸಿಟಿವ್ ಆಗಿಲ್ಲ. ಮೃತ ದೇಹ ಅಂತ್ಯಸಂಸ್ಕಾರ ಮಾಡಿ ಕೊಳೆತು ಹೋದರೂ ಕೊರೊನಾ ಪಾಸಿಟಿವ್ ಬರುತ್ತಿರುವುದು ನಿಜಕ್ಕೂ ಭಯದ ವಿಷಯ. ಎಷ್ಟು ದಿನ ವೈರಸ್ ಇರುತ್ತದೆ ಎಂಬ ಬಗ್ಗೆ ಅಧ್ಯಯನಗಳು ನಡೆಸುವುದು ಅವಶ್ಯಕವಾಗಿದೆ. ಈ ಹಿಂದೆ ಮೃತ ದೇಹದಲ್ಲಿ 7 ದಿನಕ್ಕಿಂತಲೂ ಅಧಿಕ ಕಾಲ ವೈರಸ್ ಜೀವಂತವಾಗಿ ಇರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣವು ಆಶ್ಚರ್ಯ ಮೂಡಿಸಿದೆ'' ಎಂದು ತಿಳಿಸಿದ್ದಾರೆ.