ನವದೆಹಲಿ, ಮಾ.20 (DaijiworldNews/MB) : ಕೇಂದ್ರ ಸರ್ಕಾರದ ಸಿಎಎ, ಕೃಷಿ ಮೊದಲಾದ ಕಾನೂನುಗಳ ವಿರುದ್ದ ಅಥವಾ ಪರವಾದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ರಾಜ್ಯ ಶಾಸಕಾಂಗಗಳಿಗೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದೂರುದಾರ ಸ್ವಯಂ ಸೇವಾ ಸಂಸ್ಥೆಯ ಬಳಿ ಕೇಳಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ಸಂಶೋಧನೆ ನಡೆಸಲು ತಿಳಿಸಿದೆ.

ಸ್ವಯಂ ಸೇವಾ ಸಂಸ್ಥೆಯೊಂದು ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಸ್ವಯಂ ಸೇವಾ ಸಂಸ್ಥೆಯು ಕೇಂದ್ರದ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಮೂರು ವಿವಾದಾತ್ಮಾಕ ಕೃಷಿ ಕಾನೂನುಗಳ ವಿರುದ್ಧ ರಾಜ್ಯಗಳು ನಿರ್ಣಯ ಅಂಗೀಕಾರ ಮಾಡಿರುವುದನ್ನು ಪ್ರಶ್ನಿಸಿದೆ. ಹಾಗೆಯೇ ಈ ಸಂಸ್ಥೆಯು ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಈಗಾಗಲೇ ಅನೇಕ ಅರ್ಜಿಗಳನ್ನು ವಜಾ ಮಾಡಿದ ವಿಚಾರವನ್ನು ಉಲ್ಲೇಖ ಮಾಡಿದೆ. ಕೇಂದ್ರ ಸರ್ಕಾರ, ಪಂಜಾಬ್, ರಾಜಸ್ಥಾನ, ಕೇರಳ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾಧ್ಯಕ್ಷರನ್ನು ಈ ಸ್ವಯಂ ಸೇವಾ ಸಂಸ್ಥೆಯು ದೂರಿನಲ್ಲಿ ಉಲ್ಲೇಖಿಸಿದೆ.
ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಮತ್ತು ನ್ಯಾಯಾಧೀಶರಾದ ಎ.ಎಸ್. ಬೊಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಎನ್ಜಿಒ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲೆ ಸೌಮ್ಯ ಚಕ್ರವರ್ತಿ, ''ಕೇಂದ್ರ ಶಾಸನಗಳ ವಿರುದ್ದ ರಾಜ್ಯ ವಿಧಾನಸಭೆಗಳು ಇಂತಹ ನಿರ್ಣಯ ಅಂಗೀಕರಿಸಲು ಸಮರ್ಥವಲ್ಲ. ಸಿಎಎ ವಿರುದ್ಧ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸುವುದು ಮಾನ್ಯವಾಗುವುದಿಲ್ಲ. ಸಿಎಎ ವಿರುದ್ಧದ 60 ರಿಟ್ಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇಂತಹ ವಿಷಯಗಳ ಬಗ್ಗೆ ಚರ್ಚೆ ಅಥವಾ ನಿರ್ಣಯ ಮಂಡನೆ ಮಾಡಲು ಸಭಾಧ್ಯಕ್ಷರು ಅವಕಾಶ ನೀಡಬಾರದು'' ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠವು, ''ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ವಿಧಾನಸಭೆಗೆ ಇಲ್ಲವೆಂದು ನೀವು ಹೇಗೆ ಹೇಳುತ್ತೀರಿ'' ಎಂದು ಎನ್ಜಿಒ ಅನ್ನು ಪ್ರಶ್ನಿಸಿದ್ದು, ''ದೂರುದಾರ ಎನ್ಸಿಒ ಈ ವಿಚಾರದಲ್ಲಿ ಅಧಿಕ ಸಂಶೋಧನೆ ನಡೆಸಬೇಕು. ನಾವು ಸಮಸ್ಯೆ ಬಗೆಹರಿಸುವ ಬದಲಾಗಿ ಇನ್ನಷ್ಟು ಸಮಸ್ಯೆ ಸೃಷ್ಟಿಗೆ ಇಚ್ಛೆ ಪಡುವುದಿಲ್ಲ'' ಎಂದು ಹೇಳಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.