ಬಲಿಯಾ, ಮಾ.25 (DaijiworldNews/PY): "ತ್ರಿವಳಿ ತಲಾಖ್ನಿಂದ ಮುಸ್ಲಿಂ ಮಹಿಳೆಯರನ್ನು ದೂರ ಮಾಡಿದ್ದಾಯಿತು. ಮುಂದಿನ ದಿನಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸುವುದರಿಂದ ಮುಕ್ತಿ ನೀಡಲಾಗುವುದು" ಎಂದು ಉತ್ತರಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.

ಬಲಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬುರ್ಖಾ ಧರಿಸುವುದು ದುಷ್ಟಪದ್ದತಿ. ತ್ರಿವಳಿ ತಲಾಖ್ ಅನ್ನು ನಿರ್ಮೂಲನೆ ಮಾಡಿದಂತೆ ಈ ದುಷ್ಟ ಪದ್ದತಿಯಿಂದಲೂ ಕೂಡಾ ಮಹಿಳೆಯರಿಗೆ ಮುಕ್ತಿ ನೀಡಲಾಗುವುದು. ಅನೇಕ ಮುಸ್ಲಿಂ ರಾಷ್ಟ್ರಗಳು ಇದನ್ನು ನಿಷೇಧಿಸಿವೆ. ಈ ದೇಶದಲ್ಲೂ ಕೂಡಾ ಬುರ್ಖಾವನ್ನು ನಿಷೇಧಿಸಬೇಕು" ಎಂದಿದ್ದಾರೆ.
"ಬಲಿಯಾದ ಮಸೀದಿಗಳಲ್ಲಿ ದೊಡ್ಡದಾಗಿ ಧ್ವನಿವರ್ಧಕ ಬಳಸುತ್ತಿರುವದರಿಂದ ಹತ್ತಿರದ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದಲ್ಲದೇ, ಯೋಗಾಭ್ಯಾಸ, ಧ್ಯಾನ, ಮುಂತಾದ ಚಟುವಟಿಕೆಗಳನ್ನು ಮಾಡುವಾಗ ತೊಂದರೆಯಾಗುತ್ತದೆ" ಎಂದು ಆರೋಪಿಸಿದ್ದಾರೆ.
"ಈ ಪ್ರದೇಶದ ಜನರು ತೀವ್ರ ಶಬ್ದ ಮಾಲಿನ್ಯ ಎದುರಿಸುತ್ತಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳ ಅಧ್ಯಯನಕ್ಕೆ ಕೂಡಾ ತೊಂದರೆಯಾಗುತ್ತದೆ. ಮಕ್ಕಳು, ಹಿರಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ" ಎಂದಿದ್ದಾರೆ.
"ಶಬ್ದ ಮಾಲಿನ್ಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್ನ ನಿರ್ದೇಶನಗಳನ್ನು ಉಲ್ಲೇಖಿಸಿದ ಅವರು, ಕೋರ್ಟ್ ಅನುಮತಿ ನೀಡಿದ ಪ್ರಮಾಣದಲ್ಲಷ್ಟೇ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿದ್ದಾರೆ.
ನಂತರ ಆಡಳಿತವು ಮಸೀದಿಗಳ ಧ್ವನಿವರ್ಧಕಗಳ ಸಂಖ್ಯೆಯನ್ನು ನಾಲ್ಕರಿಂದ ಎರಡಕ್ಕೆ ಇಳಿಸಲು ಹಾಗೂ ಅವುಗಳ ಪ್ರಮಾಣವನ್ನು ಕಡಿಮೆ ಮಾಡಲು ಆದೇಶಿಸಿತು.