ಬೆಂಗಳೂರು, ಮಾ.25 (DaijiworldNews/PY): ಬಿಜೆಪಿಗರು ಜೈಶ್ರೀರಾಮ್ ಎಂದು ಹೇಳುತ್ತಿದ್ದರು. ಇನ್ನು ಮುಂದೆ ಅವರು ಸಿ.ಡಿ ರಾಮ್ ಎಂದು ಹೇಳಬೇಕು ಎಂದು ವ್ಯಂಗ್ಯವಾಡಿದ್ದ ಸಿ. ಎಂ ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ, "ನಡುಗೋಡೆಯ ಮೇಲೆ ಅಡ್ಡಾಡುತ್ತಿರುವ ಸಿಎಂ ಇಬ್ರಾಹಿಂ, ಸಿಡಿ ವಿಚಾರದಲ್ಲಿ ಶ್ರೀರಾಮನನ್ನು ಎಳೆದು ತಂದಿದ್ದು ಅಕ್ಷಮ್ಯವಾಗಿದೆ" ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಆರು ಕೊಟ್ಟರೆ ಅತ್ತಕಡೆ, ಮೂರು ಕೊಟ್ಟರೆ ಇತ್ತಕಡೆ ಎನ್ನುವ ಸಿಎಂ ಇಬ್ರಾಹಿಂ ಅವರೇ ನಿಮ್ಮ ಹೇಳಿಕೆ ಅಸಂಖ್ಯಾತ ರಾಮ ಭಕ್ತರ ನಂಬಿಕೆಗೆ ಘಾಸಿ ಮಾಡಿದೆ. ಶ್ರೀರಾಮ ಭಕ್ತಿಯ ಬಗ್ಗೆ ನಮಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲವೆನ್ನುವ ಕಾಂಗ್ರೆಸ್ ನಾಯಕರು ಈಗೇಕೆ ಮೌನವಾಗಿದ್ದಾರೆ!?" ಎಂದು ಪ್ರಶ್ನಿಸಿದೆ.
"ನಡುಗೋಡೆಯ ಮೇಲೆ ಅಡ್ಡಾಡುತ್ತಿರುವ ಸಿಎಂ ಇಬ್ರಾಹಿಂ ಅವರು ಸಿಡಿ ವಿಚಾರದಲ್ಲಿ ಶ್ರೀರಾಮನನ್ನು ಎಳೆದು ತಂದಿದ್ದು ಅಕ್ಷಮ್ಯ. ಜೈಶ್ರೀರಾಮ್ ಘೋಷಣೆ ಕೂಗಿದ್ದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಶಾಸಕ ಹಲ್ಲೆ ಮಾಡಿದ್ದರು.ಹೆಸರಿನಲ್ಲಿ ರಾಮನಿದ್ದಾನೆ ಎನ್ನುವ ವಲಸೆ ನಾಯಕ ಸಿದ್ದರಾಮಯ್ಯ ಈಗೇಕೆ ಮೌನ?" ಎಂದು ಕೇಳಿದೆ.
"ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಈಗೆಲ್ಲಿದೆ ನಿಮ್ಮ ಹಿಂದುತ್ವ, ಈಗೇಕೆ ನಿಮಗೆ ಶ್ರೀರಾಮ ನೆನಪಾಗುತ್ತಿಲ್ಲ. ನಿಮ್ಮದೇ ಪಕ್ಷದ ಬೇಜಾಬ್ದಾರಿಯುತ ಶಾಸಕ ಅಸಂಖ್ಯಾತ ರಾಮಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಇಬ್ರಾಹಿಂ ಅವರಿಗೆ ನೋಟೀಸ್ ನೀಡುವ ಧೈರ್ಯ ತೋರುವಿರಾ?" ಎಂದು ಪ್ರಶ್ನಿಸಿದೆ.