ಬೆಂಗಳೂರು, ಮಾ 26 (DaijiworldNews/MS):"ಅಂತಹ ಮೈತ್ರಿ ಸರ್ಕಾರವನ್ನೇ ಉರುಳಿಸಿದ್ದೇವೆ, ಇನ್ನು ಇದ್ಯಾವ ಲೆಕ್ಕ, ಇಂತಹ 10 ಸಿಡಿಗಳು ಬಂದರೂ ಎದುರಿಸಲು ಸಿದ್ಧನಿದ್ದೇನೆ ಇನ್ನು ನಮ್ಮ ಆಟ ಪ್ರಾರಂಭವಾಗಲಿದ್ದು, ಇದರ ಹಿಂದಿನ ಮಹಾನಾಯಕ ಯಾರೆಂದು ಶೀಘ್ರದಲ್ಲೇ ಬಹಿರಂಗವಾಗಲಿದೆ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸಿಡಿಯಲ್ಲಿರುವ ಯುವತಿ ನೀಡಿದ ಲಿಖಿತ ದೂರಿಗೆ ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನನ್ನ ವಿರುದ್ದ ಅವರು ಕೊನೆಯ ಅಸ್ತ್ರವನ್ನು ಬಿಟ್ಟಿದ್ದಾರೆ. ಇದಕ್ಕೆಲ್ಲ ಅಂಜುವ ವ್ಯಕ್ತಿ ನಾನಲ್ಲ. ನಾನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿರುವೆ. ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ, ಇದ್ಯಾವ ಲೆಕ್ಕ" ಎಂದು ಹೇಳಿದ್ದಾರೆ.
"ನನ್ನ ಮೇಲೆ ಆಕೆ ಅತ್ಯಾಚಾರದ ದೂರುದಾಖಲಿಸಿದರೂ ನಾನು ಇದನ್ನು ಎದುರಿಸಲು ಶಕ್ತನಾಗಿದ್ದೇನೆ. ಈ ವಿಚಾರದಲ್ಲಿ ಮಾನಸಿಕವಾಗಿ ಸಿದ್ದನಾಗಿದ್ದೇನೆ. ಕಾನೂನು ಹೋರಾಟ ನಡೆಸುತ್ತೇನೆ. ನಾನು ಈ ವಿಚಾರದಲ್ಲಿ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ. ಏನಾಗುತ್ತೋ ನೋಡೋಣ" ಎಂದಿದ್ದಾರೆ
ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪ್ರಕರಣ ಸಂಬಂಧ ಮೊದಲಾಗಿ ನಾನು ದೂರು ನೀಡಿದ್ದೇನೆ. ನನ್ನ ದೂರಿನ ಬಗ್ಗೆ ಏನಾಗಿದೆ ಎಂದು ಪೊಲೀಸ್ ಆಯುಕ್ತರನ್ನು ಕೇಳುತ್ತೇನೆ. ಮೊದಲು ನನ್ನ ಎಫ್ಐಆರ್ ಬಗ್ಗೆ ತನಿಖೆಯಾಗಬೇಕು. ನನ್ನ ವಿರುದ್ಧದ ಷಡ್ಯಂತ್ರದ ಬಗ್ಗೆ ಗೃಹ ಸಚಿವರಿಗೆ ಹೇಳಿದ್ದೇನೆ. ನನಗೂ ಕಾನೂನು ಗೊತ್ತಿದೆ, ವಕೀಲರು ಇದ್ದಾರೆ ಎಂದೂ ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.