ಕೋಲ್ಕತ, ಮಾ.28 (DaijiworldNews/HR): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಶನಿವಾರದಂದು ನಡೆದಿದ್ದು, ಈ ವೇಳೆ ಕೆಲವೆಡೆ ಗಲಾಟೆ ನಡೆದಿದ್ದು, ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ವಿಷಕಾರಿ ಬಣ್ಣ ಎರಚಿದ್ದಾರೆ ಎಂದು ಬಿಜೆಪಿಯ ಸಂಸದೆ ದೂರಿದ್ದಾರೆ ಎನ್ನಲಾಗಿದೆ.

ದೂರು ನೀಡಿರುವ ಬಿಜೆಪಿ ಸಂಸದೆಯನ್ನು ಲಾಕೆಟ್ ಚಟರ್ಜಿ ಎಂದು ಗುರುತಿಸಲಾಗಿದೆ.
ಸಂಸದೆಯು ಶನಿವಾರ ಸಂಜೆ ರವೀಂದ್ರನಗರದ ಕಲಿತ್ಲ ಮೈದಾನದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಆ ವೇಳೆ ಕೊಡಲಿಯಾ ನಂ .2 ಗ್ರಾಮ ಪಂಚಾಯಿತಿಯ ಬಳಿ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದು, ವಿಷಕಾರಿ ಬಣ್ಣಗಳನ್ನು ಎರಚಿ ಹಲ್ಲೆ ಮಾಡಿದ್ದಾರೆ ಎಂದು ಸಂಸದೆ ದೂರಿದ್ದಾರೆ.
ಇನ್ನು ಟಿಎಂಸಿಗೆ ಸೋಲುವ ಭಯ ಆರಂಭವಾಗಿದ್ದು, ಈ ರೀತಿ ಬೇರೆ ಬೇರೆ ಮಾರ್ಗದಲ್ಲಿ ನಮ್ಮನ್ನು ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.