ಬೆಂಗಳೂರು, ಮಾ.30 (DaijiworldNews/MB) : ಚಿನ್ನದ ನಾಣ್ಯಗಳ ಮೇಲೆ ನಾಡಿಕ ಪಾರಂಪರಿಕ ಸ್ಥಳ ಹಾಗೂ ವ್ಯಕ್ತಿಗಳ ಭಾವಚಿತ್ರವನ್ನು ಟಂಕಿಸಲಾಗುತ್ತದೆ. ಈ ಮೂಲಕ ರಾಜ್ಯದ ಪರಂಪರೆ ಹಾಗೂ ರಾಜ್ಯದ ಪ್ರಸಿದ್ದ ವ್ಯಕ್ತಿಗಳನ್ನು ಜಗತ್ತಿಗೆಯೇ ಪರಿಚಯಿಸಲಾಗುತ್ತದೆ. ಕರ್ನಾಟಕ ಬ್ಯ್ರಾಂಡ್ ಸೃಷ್ಟಿಗೆ ನಾವು ಯೋಜನೆ ರೂಪಿಸಿದ್ದೇವೆ. ಸರ್ಕಾರದಿಂದಲೇ ಚಿನ್ನದ ಅಂಗಡಿ ತೆರೆಯಲು ನಿರ್ಧರಿಸಿದ್ದೇವೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಚಿನ್ನದ ನಾಣ್ಯಗಳ ಮೂಲಕ ಕರ್ನಾಟಕ ಬ್ಯ್ರಾಂಡ್ ಮಾಡುವ ಬಗ್ಗೆ ಸಚಿವ ನಿರಾಣಿಯವರು ಈಗಾಗಲೇ ಆಭರಣ ವ್ಯಾಪಾರಿಗಳು, ಇಲಾಖೆ ಅಧಿಕಾರಿಗಳ ಜತೆಯಲ್ಲಿ ಮಾತುಕತೆ ನಡೆಸಿದ್ದಾರೆ. ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಮುಖೇನ ಉತ್ಪಾದಿಸಲಾಗುವ ಚಿನ್ನವನ್ನು ಸರಕಾರಿ ಸ್ವಾಮ್ಯದ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಲು ಕರ್ನಾಟಕ ಗೋಲ್ಡ್ ಜುವೆಲರ್ಸ್ ಮೂಲಕ ಆಭರಣ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಮೈಸೂರು ಅರಮನೆ,ಪಟ್ಟದಕಲ್ಲು, ಬಾದಾಮಿ, ಐಹೊಲೆ ಸ್ಥಳಗಳು ಹಾಗೂ ಸರ್ ಎಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿಗಳಾದ ಕುವೆಂಪು, ಗೋವಿಂದ ಪೈ, ಜಿ.ಎಸ್ ಶಿವರುದ್ರಪ್ಪ, ಜ್ಞಾನ ಪೀಠ ಪುರಸ್ಕೃಥರಾದ ಶಿವರಾಮ ಕಾರಂತ, ಅನಂತಮೂರ್ತಿ, ದ.ರಾ ಬೇಂದ್ರೆ, ಕಂಬಾರ, ವಿ.ಕೃ. ಗೋಕಾಕ್, ಮಾಸ್ತಿ, ಗಿರೀಶ್ ಕಾರ್ನಾಡ್ ಈ ಚಿನ್ನದ ನಾಣ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ಗಳನ್ನು ಷರತ್ತು ಬದ್ದವಾಗಿ ಪುನರ್ ಆರಂಭ ಮಾಡಲು ಅನುಮತಿ ನೀಡಲಾಗುತ್ತದೆ. ಇದಕ್ಕೂ ಮೊದಲು ಗಣಿಗಳನ್ನು ಪುನರಾರಂಭಿಸುವವರು ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ(ಡಿಜಿಎಂಎಸ್) 90 ದಿನಗಳ ಒಳಗೆ ಪರವಾನಗಿ ಪಡೆಯಬೇಕು ಎಂದು ಕೂಡಾ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ಪೋಟ ನಡೆದ ಕಾರಣ ಡಿಜಿಎಂಎಸ್ ಪರವಾನಗಿ ಹೊಂದಿಲ್ಲದ ಎಲ್ಲ ಗಣಿಗಳು ಮುಚ್ಚಲಾಗಿದೆ. 90 ರಷ್ಟು ಮಂದಿ ಡಿಜಿಎಂಎಸ್ ಪರವಾನಗಿ ಪಡೆದಿರಲಿಲ್ಲ. ಇದರಿಂದಾಗಿ ಗಣಿ ಚಟುವಟಿಕೆಯೇ ನಿಂತ್ತಂತೆ ಆಗಿತ್ತು. ಸರ್ಕಾರಕ್ಕೆ 300 ಕೋಟಿಗಳಷ್ಟು ಆದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.