ಬೆಂಗಳೂರು, ಮಾ 30 (DaijiworldNews/MS): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಸಂತ್ರಸ್ತೆ ಯುವತಿ ಹೇಳಿಕೆಯನ್ನು ದಾಖಲಿಸಿಕೊಳ್ಳಲು ೨೪ ನೇ ಎಸಿಎಂಎಂ ಕೋರ್ಟ್ ಅಸ್ತು ನೀಡಿದೆ ಎನ್ನಲಾಗಿದೆ . ಮೊದಲು ಸಿಆರ್ಪಿಸಿ 164 ಪ್ರಕಾರ ಹೇಳಿಕೆ ದಾಖಲು ಮಾಡುತ್ತೇವೆ. ಆ ಬಳಿಕ ಯುವತಿಯ ಹೇಳಿಕೆ ಪಡೆಯುತ್ತೇವೆ. ನಂತರ ತನಿಖಾಧಿಕಾರಿಗೆ ಒಪ್ಪಿಸುತ್ತೇವೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆ ವೇಳೆ 24ನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದಾರೆ ಎನ್ನಲಾಗಿದೆ.

ಇಂದು ಸಿಡಿ ಲೇಡಿ ಪರ ವಕೀಲ ಜಗದೀಶ್ 24 ನೇ ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದು, ಈ ವಿಚಾರಣೆ ನಡೆಸಿದ ಕೋರ್ಟ್ ಯುವತಿಯ ಹೇಳಿಕೆ ಪಡೆಯಲು ಕೋರ್ಟ್ ಅನುಮತಿ ನೀಡುವ ಮೂಲಕ ಸಿಡಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.
ಯುವತಿ, ತಮಗೆ ಜೀವ ಭಯವಿರುವ ಕಾರಣ ಹಾಗೂ ಎಸ್ಐಟಿ ಮೇಲೆ ನಂಬಿಕೆ ಇಲ್ಲದಿರುವುದರಿಂದ ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡುವುದಾಗಿ ಹೇಳಿದ್ದು, ಇದಕ್ಕೆ ಅನುಮತಿ ಸಿಕ್ಕಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯದ ಮುಂದೆ ಯುವತಿ ಹೇಳಿಕೆ ದಾಖಲಿಸಿದ ಬಳಿಕ ತನಿಖಾಧಿಕಾರಿಗಳು ಯುವತಿಯ ವಿಚಾರಣೆ ನಡೆಸಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆನ್ನಲಾಗಿದೆ.
ಇನ್ನು ಸಿಡಿ ಪ್ರಕರಣದ ತನಿಖಾಧಿಕಾರಿಯಾಗಿ ನೇಮಕವಾಗಿರುವ ಎಂ.ಸಿ. ಕವಿತಾ, ಪ್ರಕರಣ ದಾಖಲಾದ ದಿನದಿಂದಲೂ ಯುವತಿ ವಿಚಾರಣೆಗೆ ಸಿಕ್ಕಿಲ್ಲ. ನೇರವಾಗಿ ಹೇಳಿಕೆಯನ್ನೂ ಕೊಟ್ಟಿಲ್ಲ. ಹೇಳಿಕೆ ಪಡೆಯಲು ಸಾಕಷ್ಟು ಬಾರಿ ಯತ್ನಿಸಿದರೂ ಯುವತಿ ಕೈಗೆ ಸಿಕ್ಕಿಲ್ಲ' ಎಂದೂ ತನಿಖಾಧಿಕಾರಿ ಎಂ.ಸಿ. ಕವಿತಾ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.