ನವದೆಹಲಿ, ಎ.01 (DaijiworldNews/MB) : ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಕಳೆದ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಇದೀಗ ಮೇ ತಿಂಗಳಲ್ಲಿ ಸಂಸತ್ತಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ.

ಮೇ ತಿಂಗಳ ಮೊದಲ ಹದಿನೈದು ದಿನದೊಳಗೆ ಸಂಸತ್ತಿಗೆ ಮಾರ್ಚ್ ನಡೆಸಲಾಗುತ್ತದೆ. ರೈತರು, ಕಾರ್ಮಿಕರು ಮಾತ್ರವಲ್ಲದೆ ಮಹಿಳೆಯರು, ದಲಿತ, ಆದಿವಾಸಿ ಸಮುದಾಯ, ನಿರುದ್ಯೋಗಿ ಯುವಜನರು ಹಾಗೂ ಬೆಂಬಲಿತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ತಿಳಿಸಿದೆ.
ತಮ್ಮ ಹಳ್ಳಿಯಿಂ ಜನರು ದೆಹಲಿಯ ಗಡಿಗೆ ವಾಹನಗಳ ಮೂಲಕ ಬರುತ್ತಾರೆ. ಬಳಿಕ ದೆಹಲಿಯಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ. ಈ ಸಂಸತ್ ಮಾರ್ಚ್ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಲಿದೆ. ಇದರ ನಿಖರ ದಿನಾಂಕ ತಿಳಿಸಲಾಗುವುದು ಎಂದು ಎಸ್ಕೆಎಂ ತಿಳಿಸಿದೆ.
ಇನ್ನು ಏಪ್ರಿಲ್ 10ರಂದು ಕೆಎಂಪಿ ಎಕ್ಸ್ಪ್ರೆಸ್ವೇ ತಡೆಯೊಡ್ಡಲು ಎಸ್ಕೆಎಂ ನಿರ್ಧರಿಸಿದೆ. ಏಪ್ರಿಲ್ 14ರಂದು ಡಾ. ಅಂಬೇಡ್ಕರ್ ಜನ್ಮ ದಿನಾಚರಣೆಯಂದು 'ಸಂವಿಧಾನ್ ಬಚಾವೋ' (ಸಂವಿಧಾನ ರಕ್ಷಿಸಿ) ಅಂದೋಲನಕ್ಕೆ ರೈತ ಸಂಘಟನೆ ಕರೆ ನೀಡಿದೆ.