ರಾಯಪುರ, ಎ.03 (DaijiworldNews/MB) : ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಗಳು ಹಾಗೂ ಮೂವರು ರಾಜ್ಯ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಘಟನೆ ಶನಿವಾರ ನಡೆದಿದ್ದು ಘಟನೆಯಲ್ಲಿ ಒಟ್ಟು 20 ಭದ್ರತಾ ಪಡೆ ಸಿಬ್ಬಂದಿಗಳಿಗೆ ಗಾಯವಾಗಿದೆ.

ಇದು ಸಿಆರ್ಪಿಎಫ್ನ ಗಣ್ಯ ಘಟಕವಾದ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್), ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್ಜಿ) ವಿಶೇಷ ಕಾರ್ಯಪಡೆ (ಎಸ್ಟಿಎಫ್) ಟಾರೆಮ್ ಪ್ರದೇಶದಲ್ಲಿ ಜಂಟಿಯಾಗಿ ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದ್ದು, ಮಧ್ಯಾಹ್ನದ ವೇಳೆ ಶೂಟೌಟ್ ಪ್ರಾರಂಭವಾಗಿದೆ ಎಂದು ಸಿಆರ್ಪಿಎಫ್ ಹೇಳಿದೆ.
ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು ಕೆಲವು ಮಾವೋವಾದಿಗಳು ಕೂಡಾ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಮಾರ್ಚ್ 23 ರಂದು, ಐಇಡಿ ಸ್ಫೋಟದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಯ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಹಲವಾರು ಮಂದಿ ಗಾಯಗೊಂಡಿದ್ದರು.