ಬೆಳಗಾವಿ, ಏ.15 (DaijiworldNews/MB) : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ತಾವು ಉಳಿದುಕೊಂಡಿದ್ದ ಹೊಟೇಲ್ನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬುಧವಾರ ಹಗಲಿನಲ್ಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಜ್ವರ ಕಂಡು ಬಂದಿತ್ತಿ. ಆದರೂ ಅವರು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಮೂಡಲಗಿ, ಗೋಕಾಕ್ನಲ್ಲಿ ಪ್ರಚಾರ ನಡೆಸಿದ್ದರು. ಹಾಗೆಯೇ ಗೋಕಾಕ್ನಲ್ಲಿ ರೋಡ್ ಶೋನಲ್ಲಿಯೂ ಭಾಗಿಯಾಗಿದ್ದರು. ಆದರೆ ಸಾಯಂಕಾಲ ಸುಸ್ತು, ಜ್ವರ ಅಧಿಕವಾಗಿದ್ದು ಈ ಹಿನ್ನೆಲೆ ತಾವು ತಂಗಿದ್ದ ಹೊಟೇಲ್ಗೆ ವಾಪಾಸ್ ಬಂದು ವಿಶ್ರಾಂತಿ ಪಡೆದಿದ್ದಾರೆ.
ಬಳಿಕ ಕೆಎಲ್ಇ ಆಸ್ಪತ್ರೆಯ ವೈದ್ಯರು ಬಂದು ಮುಖ್ಯಮಂತ್ರಿಗಳ ತಪಾಸಣೆ ನಡೆಸಿ ಔಷಧಿ ನೀಡಿದ್ದಾರೆ. ಸದ್ಯ ಸಿಎಂ ವಿಶ್ರಾಂತಿ ಪಡೆಯುತ್ತಿದ್ದು ಇಂದು ಬೆಳಿಗ್ಗೆ ಬಿಮ್ಸ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದ್ದಾರೆ. ಏತನ್ಮಧ್ಯೆ ಇಂದು ಕೂಡಾ ಸಿಎಂ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗಿದೆ.