ಹರಿದ್ವಾರ, ಎ.15 (DaijiworldNews/PY): "ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕುಂಭಮೇಳವನ್ನು ಅವಧಿಗೂ ಮೊದಲೇ ಪೂರ್ಣಗೊಳಿಸಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮುಖಂಡರ ಜೊತೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಈ ವಿಚಾರದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ" ಎಂದು ಹರಿದ್ವಾರದ ಜಿಲ್ಲಾಧಿಕಾರಿ ದೀಪಕ್ ರಾವತ್ ತಿಳಿಸಿದ್ದಾರೆ.

ಕುಂಭಮೇಳವನ್ನು ಅವಧಿಗೂ ಮುನ್ನ ಪೂರ್ಣಗೊಳಿಸಲು ಸರ್ಕಾರ ಹಾಗೂ ವಿವಿಧ ಅಖಾಡಗಳೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಗಳ ಬೆನ್ನಲ್ಲೇ ಹರಿದ್ವಾರದ ಜಿಲ್ಲಾಧಿಕಾರಿ ದೀಪಕ್ ರಾವತ್ ಅವರು ಈ ಹೇಳಿಕೆ ನೀಡಿದ್ದಾರೆ.
ಕುಂಭಮೇಳದ ಮೊದಲ ಘಟ್ಟ ಎಪ್ರಿಲ್ 13ರ ಮಂಗಳವಾರದಂದು ಅಂತ್ಯಗೊಂಡಿದ್ದು, ಈವರೆಗೆ 10 ಲಕ್ಷಕ್ಕೂ ಅಧಿಕ ಭಕ್ತರು ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ನಿಗದಿಯಂತೆ ಕುಂಭಮೇಳವು ಎಪ್ರಿಲ್ 30ರವರೆಗೆ ಮುಂದುವರೆಯಲಿದೆ.
ಏತನ್ಮಧ್ಯೆ ಹೇಳಿಕೆ ನೀಡಿರುವ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅವರು, "ಮೊದಲು ಜನರ ಆರೋಗ್ಯ ಮುಖ್ಯ. ಆದರೆ, ಅವರ ಧಾರ್ಮಿಕ ನಂಬಿಕೆಗಳನ್ನು ಎಂದಿಗೂ ಕಡೆಗಣಿಸಬಾರದು. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕುಂಭಮೇಳ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಕುಂಭ ಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ''ಕುಂಭ ಮೇಳ, ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ಸರಿಯಲ್ಲ. ಮರ್ಕಜ್ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು ಕುಂಭ ಮೇಳವು ಹೊರಗಡೆ, ಗಂಗಾ ನದಿಯ ಘಾಟ್ಗಳಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಕುಂಭ ಮೇಳದಲ್ಲಿ ಹೊರಗಿನವರು ಭಾಗಿಯಾಗುತ್ತಿಲ್ಲ, ಎಲ್ಲರೂ ನಮ್ಮ ಜನರೇ. ಆದರೆ ಮರ್ಕಜ್ ಸಭೆ ನಡೆದಾಗ ಯಾರಿಗೂ ಕೊರೊನಾವಾಗಲಿ ಅದರ ಮಾರ್ಗಸೂಚಿಯ ಬಗ್ಗೆಯಾಗಲಿ ಮಾಹಿತಿ ಇರಲಿಲ್ಲ. ಆದರೆ ಈಗ ಸಾಕಷ್ಟು ಜಾಗೃತಿಯಿದೆ. ಅಷ್ಟಕ್ಕೂ ಕುಂಭ ಮೇಳ 12 ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಇದು ಲಕ್ಷಾಂತರ ಜನರ ನಂಬಿಕೆ'' ಎಂದಿದ್ದರು.