ವಿಜಯಪುರ, ಏ.15 (DaijiworldNews/MB) : ''ನನ್ನಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳು ಇದೆ. ಹಾಗಿರುವಾಗ ನಾನ್ಯಾಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಬಾರದು? ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರು ಏಕೆ ಇರಬಾರದು?'' ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಶ್ನಿಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ನಾನು ಸಿಎಂ ಸ್ಥಾನಕ್ಕೆ ಸಮರ್ಥವಾದವನು, ಹಾಗಿರುವಾಗ ಆಕಾಂಕ್ಷಿಯಾಗುವುದಲ್ಲಿ ತಪ್ಪೇನಿಲ್ಲ'' ಎಂದು ಹೇಳಿದ ಅವರು, ''ಮುಂದೆ ಚುನಾವಣೆಯಲ್ಲಿ ಹೈಕಮಾಂಡ್ ಅವಕಾಶ ನೀಡಿದರೆ, ನಾನು ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.
''ನಾನೇನು ಭೂಹಗರಣ ಅಥವಾ ಯಾವುದೇ ಹಗರಣ ಮಾಡಿಲ್ಲ. ನನ್ನ ವಿರುದ್ದ ಯಾವುದೇ ಭ್ರಷ್ಟಾಚಾರ ಆರೋಪವೂ ಇಲ್ಲ. ಹಾಗಾಗಿ ನನ್ನಲ್ಲಿ ಸಿಎಂ ಆಗುವ ಎಲ್ಲಾ ಅರ್ಹತೆಗಳು ಇದೆ. ಮುಖ್ಯಮಂತ್ರಿಯಾಗಲು ಉತ್ತರ ಕರ್ನಾಟಕದವರೂ ಕೂಡಾ ಸಮರ್ಥರು, ವಿಜಯಪುರ ಜಿಲ್ಲೆಯವನಾದ ನಾನು ಮುಖ್ಯಮಂತ್ರಿಯಾಗಲು ಸಮರ್ಥನು'' ಎಂದಿದ್ದಾರೆ.
''ಇನ್ನು ನಾನು ಮುಖ್ಯಮಂತ್ರಿ ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ತರುವ ಕಾರ್ಯವನ್ನು ಮಾಡುತ್ತೇನೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಉತ್ತಮವಾದ ಆಡಳಿತವನ್ನು ನಾನು ನಮ್ಮ ರಾಜ್ಯದಲ್ಲಿ ನಡೆಸುತ್ತೇನೆ'' ಎಂದು ಕೂಡಾ ಹೇಳಿದ್ದಾರೆ.