ಶಿವಮೊಗ್ಗ, ಎ.15 (DaijiworldNews/PY): "ರಾಜ್ಯದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ. ಚುನಾವಣೆ ಎಂದರೆ ಅಲ್ಲಿ ಬಿಜೆಪಿಯ ಗೆಲುವು ನಿಶ್ಚಿತ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, "ಕೊರೊನಾ ಪರಿಸ್ಥಿತಿ ಬಗ್ಗೆ ಸಭೆ ಕರೆದರೂ ಯಾವುದೇ ರೀತಿಯ ಪ್ರಯೋಜನ ಇಲ್ಲ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಡಿಕೆಶಿ ಅವರಿಗೆ ಶೀಘ್ರವೇ ಅಧಿಕಾರಕ್ಕೆ ಬರಬೇಕು. ಅವರಿಗೆ ಈ ಯೋಚನೆ ಬಿಟ್ಟರೆ ಬೇರೆ ಏನೂ ಇಲ್ಲ" ಎಂದಿದ್ದಾರೆ.
"ಮುಂದಿನ ಮುಖ್ಯಮಂತ್ರಿ ನಾನು ಎಂದು ಹೇಳುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸೋತು, ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದರು. ಅವರಿಗೆ ತಾನು ಸೋತಿದ್ದೇನೆ ಎನ್ನುವ ಪರಿಜ್ಞಾನವೇ ಇಲ್ಲ. ಏನೇನೋ ಮಾತನಾಡುತ್ತಾರೆ. ಜನರ ಹಿತದೃಷ್ಟಿಯ ನಿಟ್ಟಿನಲ್ಲಿ ಸಲಹೆ, ಸೂಚನೆಗಳನ್ನು ನೀಡುವ ಬದಲು ಹೀಗೆ ಮಾತನಾಡುತ್ತಿದ್ದಾರೆ. ಡಿಕೆಶಿ ಹಗೂ ಸಿದ್ದರಾಮಯ್ಯ ಅವರಿಗೆ ಮುಂದಿನ ಜನ್ಮದಲ್ಲೂ ಅಧಿಕಾರಕ್ಕೇರುವ ಅದೃಷ್ಟ ಸಿಗೊಲ್ಲ" ಎಂದು ಲೇವಡಿ ಮಾಡಿದ್ದಾರೆ.
"ಕೊರೊನಾ ಲಸಿಕೆಯನ್ನು ಬೇರೆ ದೇಶಕ್ಕೆ ರಫ್ತು ಮಾಡುವ ವಿಚಾರದ ಬಗ್ಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಮ್ಮದು ಇಟಲಿ ಸಂಸ್ಕೃತಿಯಲ್ಲ. ಭಾರತೀಯ ಸಂಸ್ಕೃತಿ ಹಂಚಿಕೊಂಡು ತಿನ್ನುವುದು. ಕೈ ನಾಯಕರಿಗೆ ಭಾರತೀಯ ಸಂಸ್ಕೃತಿಗೆ ಒಗ್ಗುವ ಅಭ್ಯಾಸವೇ ಇಲ್ಲ. ಆ ಇಬ್ಬರು ನಾಯಕರು ಇಟಲಿ ಸಂಸ್ಕೃತಿಯಂತೆಯೇ ಹೇಳಿಕೆ ನೀಡಿದ್ದಾರೆ. ಇಬ್ಬರೂ ಕೂಡಾ ಸೋನಿಯಾ ಗಾಂಧಿಯನ್ನು ತೃಪ್ತಿಪಡಿಸಲು ಹೀಗೆ ಮಾತನಾಡುತ್ತಿದ್ದಾರೆ. ಕೊರೊನಾ ಲಸಿಕೆಯನ್ನು ನಮ್ಮ ರಾಷ್ಟ್ರದಲ್ಲಿ ಉಪಯೋಗ ಮಾಡಿಕೊಂಡೇ ಬೇರೆ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.