ಲಕ್ನೋ, ಏ.15 (DaijiworldNews/MB) : ಅಯೋಧ್ಯೆಯಲ್ಲಿನ ತಾತ್ಕಾಲಿಕ ರಾಮ ದೇಗುಲಕ್ಕೆ ಆಗಮಿಸುವ ಭಕ್ತರು 'ರಾಮ್ ರಜಕರಣ್' ಅನ್ನು (ನಿರ್ಮಾಣ ಹಂತದ ರಾಮಮಂದಿರದ ಅಡಿಪಾಯಕ್ಕಾಗಿ ತೆಗೆದ ಪವಿತ್ರ ಮಣ್ಣು) ವಿತರಿಸಲು ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದ್ದು ಈ ಪವಿತ್ರ ಮಣ್ಣು ಟ್ರಸ್ಟ್ ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟ್ರಸ್ಟ್ ಕಚೇರಿಯ ಆಫೀಸ್ ಇನ್ಚಾರ್ಚ್ ಆಗಿರುವ ಶ್ರೀಪ್ರಕಾಶ್ ಗುಪ್ತಾ, ''ಸಾಕಷ್ಟು ಭಕ್ತರು ಈ ಪವಿತ್ರ ಮಣ್ಣು ಬೇಕೆಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಈ ಪವಿತ್ರ ಮಣ್ಣನ್ನು ಟ್ರಸ್ಟ್ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿಡಲಾಗಿದೆ. ಈ ಮಣ್ಣು ಬೇಕಾದರೆ ಭಕ್ತರು ಟ್ರಸ್ಟ್ ಕಚೇರಿಯಲ್ಲಿ ವಿಚಾರಿಸಬಹುದು. ಉಚಿತವಾಗಿ ರಾಮಭಕ್ತರಿಗೆ ಈ ಪವಿತ್ರ ಮಣ್ಣನ್ನು ನೀಡಲಾಗುತ್ತದೆ'' ಎಂದು ತಿಳಿಸಿದ್ದಾರೆ.
''ಈ ಮಣ್ಣು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಕೋಟಿ ಕೋಟಿ ಜನರ ಸೂಚಕವಾಗಿದೆ. ಶ್ರೀರಾಮಚಂದ್ರನು ಜನಿಸಿದ ಸ್ಥಳದ ಈ ಮಣ್ಣು ಅತ್ಯಂತ ಪವಿತ್ರ. ಇದನ್ನು ಭಕ್ತರು ತಮ್ಮ ಮನೆಯಲ್ಲಿ ಇರಿಸಿ ಪೂಜಿಸಬಹುದು'' ಎಂದು ವಿವರಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲು ಅಡಿಪಾಯಕ್ಕಾಗಿ 2.77 ಎಕರೆ ಭೂಮಿಯನ್ನು ಅಗೆದ ಸಂದರ್ಭದಲ್ಲಿ ನೂರಾರು ಟನ್ಗಳಷ್ಟು ಮಣ್ಣನ್ನು ಹೊರತೆಗೆಯಲಾಗಿದೆ. ಈ ಮಣ್ಣನ್ನು ಟ್ರಸ್ಟ್ ಸಂಗ್ರಹಿಸಿಟ್ಟಿದೆ.
ಇನ್ನು ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ ಭಕ್ತರ 15 ಸಾವಿರದಷ್ಟು ಚೆಕ್ಗಳು ಬೌನ್ಸ್ ಆಗಿದ್ದು, ಸುಮಾರು 22 ಕೋಟಿ ರೂಪಾಯಿ ಬ್ಯಾಂಕ್ಗಳಲ್ಲಿಯೇ ಉಳಿದಿವೆ ಎಂದು ವರದಿಯಾಗಿದೆ.