ನವದೆಹಲಿ, ಎ.15 (DaijiworldNews/PY): "ಕೊರೊನಾ ಸೋಂಕನ್ನು ತಡೆಗಟ್ಟಲು ದೃಢವಾದ ಕ್ರಮಗಳನ್ನು ಕೈಗೊಳ್ಳಿ" ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಸೋಂಕನ್ನು ನಿಯಂತ್ರಿಸಿ ಜನರ ಪ್ರಾಣವನ್ನು ಹಾಗೂ ಸೋಂಕು ಹರಡುವಿಕೆಯನ್ನು ತಡೆಯಲು ದೃಢವಾದ ಕ್ರಮಗಳನ್ನು ಕೈಗೊಳ್ಳಿ. ಇದು ಎಚ್ಚರಿಕೆಯ ಗಂಟೆಯಾಗಿದೆ" ಎಂದಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯನ್ನು ಉತ್ತರಪ್ರದೇಶ ಸರ್ಕಾರ ಮರೆ ಮಾಚುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿತ್ತು. ಪ್ರಾರಂಭದಿಂದಲೂ ರಾಜ್ಯ ಸರ್ಕಾರ ಕೊರೊನಾ ಸೋಂಕು ಬಗ್ಗೆ ಎಚ್ಚರಿಕೆ ವಹಿಸಿದ್ದರೆ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಬಹುದಿತ್ತು ಎಂದಿತ್ತು.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಉತ್ತರಪ್ರದೇಶದಲ್ಲಿ ಮೇ 15 ರವರೆಗೆ 12ನೇ ತರಗತಿ ವರೆಗಿನ ಎಲ್ಲ ಶಾಲೆಗಳನ್ನು ಮುಚ್ಚುವಂತೆ, 10 ಹಾಗೂ 12ನೇ ತರಗತಿಗಳಿಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮೇ 20 ಮುಂದೂಡಿ ಗುರುವಾರ ಸರ್ಕಾರ ಆದೇಶ ಹೊರಡಿಸಿದೆ.