ತಿರುವನಂತಪುರಂ, ಏ.15 (DaijiworldNews/MB) : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂಬ ವರದಿಗಳು ಹೊರಬಿದ್ದ ಬಳಿಕ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳಿಧರನ್ ಅವರು ವಿಜಯನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಆರೋಗ್ಯ ಸಚಿವ ಕೆ.ಕೆ. ಶೈಲಜಾ ಅವರು ವಿಜಯನ್ ಯಾವುದೇ ಮಾರ್ಗಸೂಚಿ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. "ಸಿಎಂ ಅನ್ನು ಅನಗತ್ಯ ವಿವಾದಗಳಿಗೆ ಎಳೆಯುವ ಪ್ರವೃತ್ತಿ ಯಾವಾಗಲೂ ಇರುತ್ತದೆ. ಅವರು ಯಾವುದೇ ಮಾರ್ಗಸೂಚಿಯನ್ನು ಉಲ್ಲಂಘಿಸಿಲ್ಲ" ಎಂದು ಹೇಳಿದ್ದಾರೆ.

"ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಳೆದ ಒಂದು ವರ್ಷದಿಂದ ಪ್ರಾಯೋಗಿಕವಾಗಿ ಪ್ರತಿದಿನ ಕೊರೊನಾ ಮಾರ್ಗಸೂಚಿಯನ್ನು ಹೇಗೆ ಅನುಸರಿಸಬೇಕು ಎಂಬುದರ ಕುರಿತು ವಿಜಯನ್ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಕೆಲವೊಮ್ಮೆ ಅವರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ರಾಜಕೀಯ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿರುವಾಗ ನಾನು ಅವರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಾವೆಲ್ಲರೂ ಅವರು ಯಾವಾಗ ಕೊರೊನಾ ಸೋಂಕಿತರಾದರೂ ಎಂದು ದೃಢಪಡಿಸಲು ಬಯಸುತ್ತೇವೆ'' ಎಂದು ಹೇಳಿದರು.
ಕೋಝೀಕೋಡ್ ವೈದ್ಯಕೀಯ ಕಾಲೇಜಿನ ಅಧಿಕಾರಿಗಳ ಪ್ರಕಾರ, ವಿಜಯನ್ ಅವರನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 4 ರಂದು ಅವರಲ್ಲಿ ಕೊರೊನಾ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆ ಪರೀಕ್ಷೆಸಿದಾಗ ಸೋಂಕು ದೃಢಪಟ್ಟು 10 ದಿನಗಳ ಕಾಲ ಕೊರೊನಾ ಸೋಂಕು ನೆಗೆಟಿವ್ ಆದ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಹಾಗಾದರೆ ಅವರು ಏಪ್ರಿಲ್ 4 ರಂದು ಚಲನಚಿತ್ರ ತಾರೆಯರೊಂದಿಗೆ ರೋಡ್ ಶೋ ಹೇಗೆ ನಡೆಸಿದರು? ಏಪ್ರಿಲ್ 6 ರಂದು ಮತದಾನದ ದಿನದಂದು ಅವರು ತಮ್ಮ ಮನೆಯಿಂದ 500 ಮೀಟರ್ ದೂರದಲ್ಲಿ ಮತದಾನ ಕೇಂದ್ರಕ್ಕೆ ಅವರು ಬಂದಿದ್ದಾರೆ ಅಲ್ಲವೇ?'' ಎಂದು ಮುರಳಿಧರನ್ ಪ್ರಶ್ನಿಸಿದ್ದಾರೆ.
"ಎಲ್ಲರೂ ಅವರ ಮಗಳು ಪಿಪಿಇ ಕಿಟ್ ಧರಿಸಿ ಮತ ಚಲಾಯಿಸುತ್ತಿರುವುದನ್ನು ನೋಡಿದ್ದಾರೆ. ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ ತಾವು ಕೂಡಾ ಕೊರೊನಾ ಮಾರ್ಗಸೂಚಿ ಪಾಲಿಸಬೇಕು. ಹೀಗಿರುವಾಗ ವಿಜಯನ್ ಅವರಿಂದ ದೊಡ್ಡ ಪ್ರಮಾಣದ ಉಲ್ಲಂಘನೆ ಕಂಡುಬಂದಿದೆ. ಆದ್ದರಿಂದ ಕೇರಳ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಾಕೆಂದರೆ ಕಾನೂನಿನ ಮುಂದೆ ಬೇರೆ ಯಾರೂ ದೊಡ್ಡವರಲ್ಲ" ಎಂದು ಹೇಳಿದ್ದಾರೆ.
''ಕೊರೊನಾ ಸೋಂಕು ದೃಢಪಟ್ಟ ಸಂದರ್ಭ ಪಿಣರಾಯಿ ವಿಜಯನ್ ಅವರು ಕಾರಿನಲ್ಲಿ ಆಸ್ಪತ್ರೆಗೆ ಸಂಚರಿಸಿದ್ದಾರೆ. ಇದನ್ನು ಎಲ್ಲರೂ ನೋಡಿದ್ದಾರೆ. ಹಾಗೆಯೇ ಅವರು ಆಸ್ಪತ್ರೆಯಿಂದ ಹಿಂದಿರುಗುವಾಗ ಕೊರೊನಾ ಪಾಸಿಟಿವ್ ಆಗಿದ್ದ ತನ್ನ ಪತ್ನಿಯ ಜೊತೆಯಲ್ಲೇ ಬಂದಿದ್ದಾರೆ'' ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಎರಡು ದಿನಗಳ ನಂತರ ಏಪ್ರಿಲ್ 8 ರಂದು ವಿಜಯನ್ ಅವರಿಗೆ ಕೊರೊನಾ ದೃಢಪಟ್ಟಿದೆ. ನಿಯಮಗಳ ಪ್ರಕಾರ, ಕೊರೊನಾ ದೃಢಪಟ್ಟವರನ್ನು 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.