ಬೆಂಗಳೂರು, ಏ. 15 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕು ಕಳೆದ ಕೆಲವು ದಿನಗಳಿಂದ ಹೆಚ್ಚಳವಾಗುತ್ತಿದೆ. ಒಂದೊಮ್ಮೆ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಗುರುವಾರದಂದು ರಾಜ್ಯದಲ್ಲಿ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ.

ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ 14,738 ಕೊರೋನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,09,650ಕ್ಕೆ ಏರಿಕೆಯಾದಂತಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 66 ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13,112ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇನ್ನು ಗುರುವಾರದಂದು ಬೆಂಗಳೂರಿನಲ್ಲಿ 10,497 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5,12,521ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 3,591 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನುವ ಮಾಹಿತಿ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.