ಕಲಬುರ್ಗಿ, ಎ.16 (DaijiworldNews/PY): "ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಜೊತೆಗೆ ಜನತಾ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್ಡೌನ್ ಮಾಡುವ ವಿಚಾರದ ಬಗ್ಗೆ ಎಪ್ರಿಲ್ 18ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು" ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಬೆಂಗಳೂರಿಗೆ ವಾಪಾಸ್ಸಾಗುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಿಢೀರನೇ ಲಾಕ್ಡೌನ್ ಅಥವಾ ವಾರಾಂತ್ಯ ಲಾಕ್ಡೌನ್ ಘೋಷಿಸುವುದಿಲ್ಲ. ಇದಕ್ಕೆ ಎಲ್ಲಾ ಪಕ್ಷಗಳ ಮುಖಂಡರ ಸಲಹೆ, ಸೂಚನೆಗಳು ಅಗತ್ಯ. ಹಾಗಾಗಿ ಸಭೆಯ ನಂತರವೇ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
"ಬೆಂಗಳೂರು ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮ ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಈ ಬಗ್ಗೆ ನಿರ್ದೇಶನ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
"ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಮಹಾರಾಷ್ಟ್ರ ಮಾದರಿಯ ಕ್ರಮಗಳನ್ನು ಅನುಸರಿಸಲು ಚಿಂತನೆ ನಡೆದಿದೆ. ಲಾಕ್ಡೌನ್ ಜಾರಿ ಆಗಲಿ ಅಥವಾ ಬಿಡಲಿ. ನೀವು ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ನಾನು ಸೂಚಿಸಿದ್ದೇನೆ" ಎಂದಿದ್ದಾರೆ.