ರಾಯ್ಬರೇಲಿ, ಎ.16 (DaijiworldNews/PY): ಇನಿಯನ ಜೊತೆ ಮಾತನಾಡಲು ಹಾಗೂ ಚಾಟ್ ಮಾಡಲು ಅಡ್ಡಿಪಡಿಸಿದ ಕಾರಣ 19ರ ಬಾಲಕಿ ತನ್ನ 9 ವರ್ಷದ ಸೋದರನನ್ನು ಇಯರ್ ಫೋನ್ ಕೇಬಲ್ನಿಂದ ಬಿಗಿದು ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.

ಹತ್ಯೆ ಮಾಡಿದ ಬಳಿಕ ಸಹೋದರನ ಮೃತದೇಹವನ್ನು ಸ್ಟೋರ್ ರೂಮ್ನಲ್ಲಿ ಇಟ್ಟಿದ್ದಳು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭ ಹುಡುಗಿ, ತನ್ನ ಬಾಯ್ಫ್ರೆಂಡ್ ಜೊತೆ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡುತ್ತಿದ್ದಳಂತೆ. ಇದನ್ನು ಮೊದಲೇ ಗಮನಿಸಿದ ಆಕೆಯ ಸಹೋದರ ಕೆಲ ದಿನಗಳ ಹಿಂದೆ ಈ ವಿಚಾರವನ್ನು ಪೋಷಕರ ಬಳಿ ಹೇಳಿದ್ದ. ಇದಾದ ಬಳಿಕ ಪೋಷಕರು ಆಕೆಗೆ ಬೈದು, ಬುದ್ದಿವಾದ ಹೇಳಿದ್ದರು.
"ಎಪ್ರಿಲ್ 8ರ ಗುರುವಾರದಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಹುಡುಗಿ ಫೋನ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ಸಹೋದರ ಮಾತನಾಡದಂತೆ ತಡೆಯುಲು ಯತ್ನಿಸುತ್ತಿದ್ದ. ನಂತರ ಇಬ್ಬರ ನಡುವೆ ಜಗಳ ನಡೆದಿದ್ದು, ಸಹೋದರ ಅಕ್ಕನ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಸಹನೆ ಕಳೆದುಕೊಂಡ ಆಕೆ ಇಯರ್ ಫೋನ್ ಕೇಬಲ್ನಿಂದ ಸಹೋದರನ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾಳೆ" ಎಂದು ರಾಯ್ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಮನೆಗೆ ವಾಪಾಸ್ಸಾದ ಪೋಷಕರು ಮಗ ಕಾಣದೇ ಇದ್ದುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಮನೆಯ ಸ್ಟೋರ್ ರೂಂ ನಿಂದ ವಾಸನೆ ಬರುತ್ತಿದ್ದಾಗ ಸಂಶಯಗೊಂಡು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಇದಾದ ಬಳಿಕ ಬಾಲಕನ ತಂದೆ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣ ಸಂಬಂಧ ಪೊಲೀಸರು ನೆರೆಮನೆಯವರನ್ನು ವಶಕ್ಕೆ ಪಡೆದುಕೊಂಡಿದ್ದರು.
"ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು, ಘಟನೆ ನಡೆದ ಸಮೀಪವಿದ್ದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಯಾವುದೋ ವ್ಯಕ್ತಿ ಓಡಾಡುತ್ತಿರುವುದು ತಿಳಿದುಬಂದಿದೆ. ಈ ಬಗ್ಗೆ ಅನುಮಾನಗೊಂಡು ಮನೆಯವರನ್ನು ವಿಚಾರಣೆ ನಡೆಸಿದಾಗ ಅಕ್ಕನೇ ಸ್ವಂತ ಸಹೋದರನನ್ನು ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯೇ ತಪ್ಪೊಪ್ಪಿಕೊಂಡಿದ್ದಾಳೆ" ಎಂದು ಎಸ್ಪಿ ಕುಮಾರ್ ಹೇಳಿದ್ದಾರೆ.
ಸದ್ಯ, ಆರೋಪಿ ಸಹೋದರಿಯನ್ನು ಬಂಧಿಸಲಾಗಿದ್ದು, ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ.