ಬೆಂಗಳೂರು, ಏ.16 (DaijiworldNews/HR): "ಕಾರ್ಪೋರೇಟ್ ವಲಯದ ಆಸ್ಪತ್ರೆಗಳು ಕಡಿಮೆ ರೋಗಲಕ್ಷಣ ಇರುವ ಸೋಂಕಿತರ ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ಹೋಟೆಲ್ಗಳ ಜತೆ ಒಪ್ಪಂದ ಮಾಡಿಕೊಂಡು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಲು ಕ್ರಮವಹಿಸಬೇಕು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, "ಹೆಚ್ಚು ರೋಗಲಕ್ಷಣಗಳುಳ್ಳ ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕೊರೊನಾ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು" ಎಂದರು.
ಇನ್ನು "ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇಕಡ 50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ಕೊರೊನಾ ರೋಗಿಗಳಿಗಾಗಿ ಕಾಯ್ದಿರಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,000 ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗಾಗಿ ಮೀಸಲಿಡಬೇಕು" ಎಂದಿದ್ದಾರೆ.
"ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆ ಮೇಲೆ ನಿಗಾ ಇಡಲು ಐಎಎಸ್, ಐಪಿಎಸ್, ಜಲಮಂಡಳಿ, ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು" ಎಂದು ಆದೇಶಿಸಿದ್ದಾರೆ.
"ಕೊರೊನಾ ಸೋಂಕಿನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು, ಉಳಿದಂತೆ ಕೊರೊನಾ ಲಕ್ಷಣಗಳಿಲ್ಲದ ರೋಗಿಗಳಿಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು ಹಾಗೂ ಅಗತ್ಯವಿರುವಷ್ಟು ದಿನಗಳು ಮಾತ್ರ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬೇಕು" ಎಂದರು.
ಇನ್ನು "ರಾಜ್ಯದಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಇಲ್ಲ. ಆದರೂ ತುರ್ತಾಗಿ 5,000 ಆಮ್ಲಜನಕ ಸಿಲಿಂಡರ್ ಖರೀದಿ ಮಾಡಬೇಕು. ರೆಮ್ ಡೆಸಿವಿರ್ ಔಷಧಿ ಕೂಡ ಸಾಕಷ್ಟು ದಾಸ್ತಾನು ಇದ್ದರು ಕೂಡ ಹೆಚ್ಚುವರಿಯಾಗಿ ಈ ಔಷಧಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
"ಕೊರೊನಾ ಪರೀಕ್ಷೆ ವರದಿಯನ್ನು 24 ಗಂಟೆಗಳ ಒಳಗಾಗಿ ನೀಡುವ ವ್ಯವಸ್ಥೆ ಮಾಡಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಬೆಂಗಳೂರಿನಲ್ಲಿ 400 ಆಂಬುಲೆನ್ಸ್ ಒದಗಿಸಬೇಕು. ಎಲ್ಲ ಜಿಲ್ಲೆಗಳಲ್ಲೂ ಅಗತ್ಯ ಸಂಖ್ಯೆಯ ಆಂಬುಲೆನ್ಸ್ ಒದಗಿಸಬೇಕು" ಎಂದರು.
"ಬೆಂಗಳೂರು ನಗರದಲ್ಲಿ ಕೊರೊನಾದಿಂದ ಮೃತಪಟ್ಟ ಶವಗಳ ಸಾಗಿಸಲು 49 ಆಂಬ್ಯೂಲೆನ್ಸ್ಗಳನ್ನು ಉಚಿತವಾಗಿ ಸೇವೆ ಒದಗಿಸಲಾಗುವುದು ಮತ್ತು ಕೊರೊನಾದಿಂದ ಮೃತಪಟ್ಟ ಶವಗಳ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸಲಾಗುವುದು" ಎಂದಿದ್ದಾರೆ.
ಇನ್ನು "ಬಿಬಿಎಂಪಿಯು ತನ್ನ ಎಲ್ಲಾ ವಲಯಗಳ ಮತ್ತು ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಿ ಕೊರೊನಾ ರೋಗಿಗಳ ಸಹಾಯಕ್ಕೆ ಸದಾ ಬದ್ಧರಾಗಿರುವಂತೆ ಕ್ರಮ ವಹಿಸಬೇಕು ಹಾಗೂ ಸಹಾಯವಾಣಿಗಳಿಗೆ ನುರಿತ ವ್ಯಕ್ತಿಗಳನ್ನು ನೇಮಿಸಿ ಸದೃಢಗೊಳಿಸಬೇಕು" ಎಂದು ತಿಳಿಸಿದ್ದಾರೆ.