ಮುಜಫರ್ನಗರ, ಏ.19 (DaijiworldNews/MB) : ಮುಜಫರ್ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಹದಿನೈದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

'ಕೇವಲ ಮೋಜಿಗಾಗಿ' ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಾ ಯುವ ಗುಂಪು ಟ್ರ್ಯಾಕ್ಟರ್ನಲ್ಲಿ ಕುಳಿತಿರುವ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ಆರು ಮಂದಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಳೆದ ವಾರ ಮುಜಫರ್ನಗರ ಜಿಲ್ಲೆಯ ರತನ್ಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಸಿನಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್ ಆದ ನಂತರ ವಿಡಿಯೋದಲ್ಲಿರುವ ಆರು ಮಂದಿ ಶಂಕಿತರನ್ನು ಗುರುತಿಸಿದ ಪೊಲೀಸರು ಈ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಇಬ್ಬರು ಅಪ್ರಾಪ್ತರಾಗಿದ್ದು ಈ ಹಿನ್ನೆಲೆ ಎಚ್ಚರಿಕೆ ನೀಡಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
15 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 505/2 (ಸಾರ್ವಜನಿಕ ಕಿಡಿಗೇಡಿತನಕ್ಕೆ ಪ್ರಚೋದನಕಾರಿ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರತನ್ಪುರಿ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ವಿಂದ್ಯಾಚಲ್ ತಿವಾರಿ ಈ ಬಗ್ಗೆ ಮಾತನಾಡಿ, "ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ಆರು ಜನರನ್ನು ಬಂಧಿಸಲಾಗಿದೆ. ಇತರರ ಬಂಧನಕ್ಕೆ ಕಾರ್ಯಚರಣೆ ನಡೆಸಲಾಗುತ್ತಿದೆ. ತನಿಖೆ ನಡೆಯುತ್ತಿದ್ದು ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ತಿಳಿಸಿದ್ದಾರೆ.
ಬುಧಾನಾ ಉಪ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಗೌತಮ್, "ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಂಡು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಅವರಿಗೆ ಕಠಿಣ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ. ಉಳಿದ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದವರನ್ನು ಪತ್ತೆ ಕಾರ್ಯ ನಡೆಯುತ್ತಿದೆ'' ಎಂದು ಹೇಳಿದ್ದಾರೆ.