ನವದೆಹಲಿ, ಎ.23 (DaijiworldNews/PY): "ಕೊರೊನಾದ ಎರಡನೇ ಅಲೆಯ ಉಲ್ಬಣವು ಭಾರತದ ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಅಪಾಯ" ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರು ಸದಸ್ಯರನ್ನೊಳಗೊಂಡ ವಿತ್ತೀಯ ನೀತಿ ಸಮಿತಿ ಇತ್ತೀಚೆಗೆ ವಿತ್ತೀಯ ಸಭೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

"ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯ ಮಟ್ಟದಲ್ಲಿ ಮಿನಿ ಲಾಕ್ಡೌನ್ ಹೇರಲಾಗುತ್ತಿದ್ದು, ಇದು ವ್ಯಾಪಾರ-ವಹಿವಾಟು, ಸಂಪರ್ಕ-ತೀವ್ರ ವಲಯಗಳ ಬೇಡಿಕೆಯನ್ನು ಕುಂಠಿತಗೊಳಿಸಬಹುದು" ಎಂದು ವಿತ್ತೀಯ ಸಮಿತಿ ಸದಸ್ಯರು ತಿಳಿಸಿದ್ದಾರೆ.
"ಬೇಡಿಕೆಗಳ ಪರಿಸ್ಥಿತಿ ಸುಧಾರಣೆ, ಸರ್ಕಾರದ ಹೂಡಿಕೆ ಹೆಚ್ಚಿಸುವ ಕ್ರಮಗಳು ಬೆಳವಣಿಗೆಯ ನೀರೀಕ್ಷೆಗಳನ್ನು ತಲೆಕೆಳಗೆ ಮಾಡಿವೆ. ಇದೀಗ ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದು, ಇದು ಭಾರತೀಯ ಆರ್ಥಿಕತೆಗೆ ದೊಡ್ಡ ಸವಾಲಾಗಿದೆ. ಆರ್ಥಿಕ ಚೇತರಿಕೆಯನ್ನು ಭದ್ರಪಡಿಸುವುದು ಅನಿವಾರ್ಯವಾಗಿದೆ" ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
"ಚಿಲ್ಲರೆ ಹಣದುಬ್ಬರ ಹಾಗೂ ಕೊರೊನಾದ ಎರಡನೇ ಅಲೆಯ ಬಳಿಕ ಉಂಟಾಗಿರುವ ಆರ್ಥಿಕ ಅನಿಶ್ಚಿತ ಹಿನ್ನೆಲೆ, ಪ್ರಸ್ತುತ ಆರ್ಥಿಕ ಸಾಲಿನ ತ್ರೈಮಾಸಿಕ ರೆಪೊ ದರ ಹಾಗೂ ರಿಸರ್ವ್ ರೆಪೊ ದರವನ್ನು ಬದಲಾವಣೆ ಮಾಡದೇ ಕಳೆದ ಆರ್ಥಿಕ ಸಾಲಿನ ತ್ರೈಮಾಸಿಕದಷ್ಟೇ ಇರಿಸಿದೆ" ಎಂದು ಹೇಳಿದ್ದಾರೆ.