ನವದೆಹಲಿ, ಎ.25 (DaijiworldNews/PY): "ದೆಹಲಿಯ ಕೊರೊನಾ ಸೋಂಕಿತರಿಗೆ ತಮ್ಮ ಪ್ರತಿಷ್ಠಾನದ ಮೂಲಕ ಉಚಿತ ಆಂಟಿ-ವೈರಲ್ ಡ್ರಗ್ ಫ್ಯಾಬಿಫ್ಲೂ ಹಾಗೂ ಆಮ್ಲಜನಕ ಸಿಲಿಂಡರ್ಗಳನ್ನು ವಿತರಿಸಲಿದ್ದೇವೆ" ಎಂದು ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

"ದೆಹಲಿ ನನ್ನ ಮನೆ. ನನ್ನ ಕೊನೆಯ ಉಸಿರು ಇರುವಲ್ಲಿಯವರೆಗೂ ನಾನು ಜನರ ಸೇವೆ ಮಾಡುತ್ತೇನೆ. ಹಲವಾರು ಮಂದಿ ಬೆಡ್, ಆಕ್ಸಿಜನ್ ಹಾಗೂ ಔಷಧ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಾದಷ್ಟು ನಾನು ಸಹಾಯ ಮಾಡುತ್ತೇನೆ" ಎಂದಿದ್ದಾರೆ.
"ಆಕ್ಸಿಜನ್ ಫ್ಯಾಬಿಫ್ಲೂ, ಔಷಧಗಳನ್ನು ಪಡೆಯಲು ಕೊರೊನಾ ಸೋಂಕಿತರು ಆಧಾರ್ ಕಾರ್ಡ್ನೊಂದಿಗೆ ಬರಬೇಕು ಎಂದು ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ರಾಷ್ಟ್ರ ರಾಜಧಾನಿಯಲ್ಲಿ ಆರು ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಲಾಗುತ್ತಿದ್ದು, ಮೇ 3ರ ಸೋಮವಾರದಿಂದ ಬೆಳಗ್ಗೆ 5 ಗಂಟೆಯವರೆಗೂ ಲಾಕ್ಡೌನ್ ಅನ್ನು ವಿಸ್ತರಣೆ ಮಾಡಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಲಾಕ್ಡೌನ್ ಅಗತ್ಯ ಇದೆ. ಆಕ್ಸಿಜನ್ ಸಮಸ್ಯೆ ಉಂಟಾಗಿದ್ದು, ರಾಜ್ಯಗಳು ಆಕ್ಸಿಜನ್ ನೀಡಬೇಕು" ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.