ಬೆಂಗಳೂರು, ಏ.27 (DaijiworldNews/MB) : ''ಕೆಲವರು ಇನ್ನು ಮುಂದೆ ಲಸಿಕೆ ಸಿಗಲ್ಲ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಅದೆಲ್ಲಾ ಸುಳ್ಳು. ಕಠಿಣ ಕ್ರಮದ ನಡುವೆಯೂ ಕೊರೊನಾ ಲಸಿಕೆ ನೀಡಲಾಗುವುದು. ಲಸಿಕೆ ಅಭಿಯಾನ ಮುಂದುವರೆಯಲಿದೆ'' ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ ಕೆಲವು ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದೆ. ಈ ನಡುವೆ ಲಸಿಕೆ ನೀಡುವ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದೆ. ಅಗತ್ಯ ಸೇವೆಯಲ್ಲಿ ಲಸಿಕೆ ಪಡೆಯುವುದು ಕೂಡಾ ಒಂದಾಗಿದೆ. ಈಗ ಲಸಿಕೆ ನೀಡುವುದು ಮಾತ್ರ ನಮಗೆ ಇರುವ ಉಪಾಯ'' ಎಂದು ಸ್ಪಷ್ಟಪಡಿಸಿದರು.
''ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ'' ಎಂದು ಮನವಿ ಮಾಡಿದ ಅವರು, ''ಈವರೆಗೂ ಲಸಿಕೆ ಕೊರತೆಯಾಗದಂತೆ ನೋಡಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ಜನಸಂಖ್ಯೆಯ ಆಧಾರದಲ್ಲಿ ಎಲ್ಲ ರಾಜ್ಯಕ್ಕೂ ಸಮಾನವಾಗಿ ಕೊರೊನಾ ಲಸಿಕೆಯನ್ನು ಪೂರೈಕೆ ಮಾಡುತ್ತಿದೆ. ಹೀಗಿರುವಾಗ ಲಸಿಕೆ ಸಿಗುವುದಿಲ್ಲ ಎಂಬ ಸುದ್ದಿ ಸುಳ್ಳು'' ಎಂದು ಹೇಳಿದರು.
''ಲಸಿಕೆ ಪಡೆಯುವುದರಿಂದ ನಾವು ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯ. ನಾವೀಗ ಮೂರನೇ ಕೊರೊನಾ ಅಲೆ ಆರಂಭವನ್ನು ತಡೆಯಲು ಸಿದ್ದತೆಯನ್ನು ನಡೆಸಬೇಕು. ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕ್ರಮ ಅನಿವಾರ್ಯವಾಗಿದೆ. ಜನರು ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಬೇಕು'' ಎಂದು ಮನವಿ ಮಾಡಿದರು.
ಇನ್ನು ತಾನು ತಡರಾತ್ರಿ ಕೋಲಾರಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಅವರು, ''ಕೋಲಾರದಲ್ಲಿ 40 ವೆಂಟಿಲೇಟರ್ ಬೆಡ್ ನೀಡಲಾಗಿದ್ದು ಆಕ್ಸಿಜನ್ ಪೈಪ್ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದನ್ನು ಅಲ್ಲಿನ ಸಿಬ್ಬಂದಿಗಳು ಸರ್ಕಾರದ ಗಮನಕ್ಕೆ ತರಬೇಕಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆ ತಡರಾತ್ರಿಯೇ ಅಧಿಕಾರಿಗಳನ್ನು ಅಮಾನತು ಮಾಡಿದ್ದೇನೆ'' ಎಂದು ತಿಳಿಸಿದರು.