ಥಾಣೆ, ಎ.28 (DaijiworldNews/PY): ಇಲ್ಲಿನ ಮುಂಬ್ರಾ ಪ್ರದೇಶದಲ್ಲಿನ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ.

"ಎಪ್ರಿಲ್ 28ರ ಬುಧವಾರ ಮುಂಜಾನೆ ಈ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯಿಂದ 20ಕ್ಕೂ ಅಧಿಕ ರೋಗಿಗಳನ್ನು ಸ್ಥಳಾಂತರಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿ ಅವಘಡದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಕೂಡಲೇ ಮಾಹಿತಿ ನೀಡಲಿದ್ದಾರೆ" ಎಂದು ಡಾ.ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವ ಸಂದರ್ಭ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.