ನವದೆಹಲಿ, ಏ 28 (DaijiworldNews/MS): ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಉಲ್ಬಣವಾಗಿ ಎರಡನೇ ಅಲೆ ವೇಗವಾಗಿ ಹರಡಲು ಕಾರಣವಾಗಿರುವ ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೋನಾ ವೈರಸ್ ಇತರ 12ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದೆ.

ಕೋವಿಡ್ -19 ರ ಬಿ .1.617 ರೂಪಾಂತರವು ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ಮಂಗಳವಾರದ ವೇಳೆಗೆ "ಕನಿಷ್ಠ 17 ದೇಶಗಳಲ್ಲಿ" 1,200 ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ, ಇದು ಬೇರೆ ರೂಪಾಂತರಿ ಕೊರೋನಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವರದಿಯಲ್ಲಿ ತಿಳಿಸಿದೆ.
ಕೊರೋನಾ ರೂಪಾಂತರಿ ಮೂಲ ಕೊರೋನಾ ವೈರಸ್ ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಅತಿ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಲಸಿಕೆಯಿಂದಲೂ ತಪ್ಪಿಸಿಕೊಳ್ಳಲು ಸಮರ್ಥವಾಗಿದ್ದು, ಲಸಿಕೆ ಸ್ವಲ್ಪ ಮಟ್ಟಿಗೆ ಮಾತ್ರ ರಕ್ಷಣೆ ನೀಡಬಲ್ಲದು ಎಂದು ಯುಎನ್ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೊನಾ ವೈರಸ್ ಈಗ ವಿಶ್ವದಾದ್ಯಂತ 3.1 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇನ್ನು ರೂಪಾಂತರಿ ಬಿ.1.617 ಕೊರೋನಾ ರೂಪಾಂತರಿ ಮತ್ತು ಬೇರೆ ರೂಪಾಂತರಿ ಕೊರೋನಾ ಬಗ್ಗೆ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆಯಿದ್ದು, ಅವುಗಳು ಹೇಗೆ ಹಬ್ಬುತ್ತಿವೆ, ಅವುಗಳ ಹರಡುವಿಕೆಯ ಪರಿಣಾಮವೇನು, ತೀವ್ರತೆ, ಸೋಂಕಿನ ಅಪಾಯಗಳನ್ನು ತುರ್ತಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.