ಬೆಂಗಳೂರು, ಏ.30 (DaijiworldNews/HR): ಕೊರೊನಾ ಸೋಂಕಿತರನ್ನು ತುಮಕೂರಿನಿಂದ ಬೆಂಗಳೂರಿಗೆ ಹೊತ್ತು ತರುತ್ತಿದ್ದ ಆಂಬುಲೆನ್ಸ್ಗೆ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ರಸ್ತೆ ಮಧ್ಯೆಯೇ ಆಂಬುಲೆನ್ಸ್ ಹೊತ್ತಿ ಉರಿದ ಘಟನೆ ನೆಲಮಂಗಲದ ಬಳಿ ನಡೆದಿದೆ.

ನಾಲ್ವರು ಸೋಂಕಿತರನ್ನು ತುಮಕೂರಿನಿಂದ ಬೆಂಗಳೂರಿಗೆ ಹೊತ್ತು ಬರುತ್ತಿದ್ದ ಆಂಬುಲೆನ್ಸ್ ನೆಲಮಂಗಲದ ಎಡೆಹಳ್ಳಿ ಬಳಿ ಅಪಘಾತಕ್ಕೀಡಾಗಿದೆ.
ಇನ್ನು ಆಂಬುಲೆನ್ಸ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಆಂಬುಲೆನ್ಸ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ರಸ್ತೆ ಮಧ್ಯೆಯೇ ಧಗಧಗನೆ ಉರಿದಿದೆ, ಆದರೆ ಅಪರಿಚಿತ ವಾಹನದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.
ಆಂಬುಲೆನ್ಸ್ನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಇನ್ನೊಂದು ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.