ಮುಂಬೈ, ಮೇ 02 (DaijiworldNews/MB) : ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ರಾಜ್ಯದಲ್ಲಿ ದಾಖಲಾಗುತ್ತಿದೆ. ರಾಜ್ಯದಲ್ಲಿ ಈಗ 10 ವರ್ಷದೊಳಗಿನ ಮಕ್ಕಳಿಗೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಭೀತಿ ಮನೆ ಮಾಡಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೇವಲ ಒಂದು ತಿಂಗಳಲ್ಲೇ ರಾಜ್ಯದಲ್ಲಿನ ಮಕ್ಕಳಿಗೆ ಶೇ.51 ರಷ್ಟು ಸೋಂಕು ಅಧಿಕವಾಗಿದೆ. ರಾಜ್ಯದಲ್ಲಿ ಏಪ್ರಿಲ್ 3 ರವರೆಗೂ 10 ವರ್ಷದೊಳಗಿನ 1,34,470 ರಷ್ಟು ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಕೇವಲ 25 ದಿನಗಳಲ್ಲಿ 75,387 ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಶೇ.51ರಷ್ಟು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 31-40 ವರ್ಷದವರಲ್ಲೇ ಅಧಿಕ ಸೋಂಕು ಪತ್ತೆಯಾಗಿದೆ. 31-40 ವರ್ಷದ ಶೇ.22.09 ರಷ್ಟು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. 10 ವರ್ಷ ವಯಸ್ಸಿನವರಲ್ಲಿ ಶೇ. 3.04 ರಷ್ಟು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ, 11-20 ವಯಸ್ಸಿನವರಲ್ಲಿ ಶೇ. 6.80 ರಷ್ಟು, 21-30 ವಯಸ್ಸಿನವರಲ್ಲಿ ಶೇ. 17.51 ರಷ್ಟು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಶೇ.17.15ರಷ್ಟು 61 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇನ್ನು ರಾಜ್ಯದಲ್ಲಿ 72.6 ರಷ್ಟು ಯುವ ಜನರಲ್ಲಿ ಕೊರೊನಾ ದೃಢಪಟ್ಟಿದೆ. ಪುರುಷರಲ್ಲೇ ಅಧಿಕ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ 1,95,57,457 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಮಹಾರಾಷ್ಟ್ರ ರಾಜ್ಯದಲ್ಲೇ 46,02,472 ಮಂದಿಗೆ ಪಾಸಿಟಿವ್ ಆಗಿದೆ. ದೇಶದಲ್ಲಿ 2,15,542 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಮಹಾರಾಷ್ಟ್ರ ಒಂದು ರಾಜ್ಯದಲ್ಲೇ 68,813 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.