ಬೆಂಗಳೂರು, ಮೇ.11 (DaijiworldNews/PY): "ಕೊರೊನಾದ ಮೂರನೇ ಅಲೆಯನ್ನು ನಿಯಂತ್ರಿಸಲು ಈಗಿನಿಂದಲೇ ತಯಾರಾಗಬೇಕು. ಇದನ್ನು ನಿಯಂತ್ರಿಸಲು ಕಾರ್ಯತಂತ್ರ ರೂಪಿಸಬೇಕು" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ಎರಡನೇ ಅಲೆಯ ನಿಯಂತ್ರಣದ ಬಗ್ಗೆ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾದ ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ನಿಯಂತ್ರಣಕ್ಕೆ ಕೂಡಲೇ ಕಾರ್ಯಪಡೆ ಸಮಿತಿ ರಚಿಸಬೇಕು" ಎಂದು ತಿಳಿಸಿದ್ದಾರೆ.
"ಸಾರ್ವಜನಿಕರು ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅವಶ್ಯಕತೆ ಇರುವ ರೋಗಿಗಳಿಗೆ ಬೆಡ್ ಹಂಚಿಕೆ ಹಾಗೂ ಅಗತ್ಯಕ್ಕಾನುಸಾರ ರೆಮ್ಡಿಸಿವರ್ ಔಷಧಿಯನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
"ಖಾಸಗಿ ಆಸ್ಪತ್ರೆ ಬೆಡ್ಗಳ ಬಗ್ಗೆ ನಿಗಾವಹಿಸಬೇಕು. ರೆಮ್ಡಿಸಿವರ್, ಆಕ್ಸಿಜನ್, ಬೆಡ್ ಹಾಗೂ ಇತರೆ ವಿಷಯಗಳಲ್ಲಿ ಅಕ್ರಮ ಕಂಡುಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಹಾಗೂ ಆಸ್ಪತ್ರೆಗಳಿಗೆ ಈಗಿನಿಂದಲೇ ಹಾಕುವ ಕಾರ್ಯವನ್ನು ಆರಂಭಿಸಿ" ಎಂದು ತಿಳಿಸಿದ್ದಾರೆ.
"ಸಾಂಕ್ರಾಮಿಕ ರೋಗತಜ್ಞರ ಹಾಗೂ ವೈರಾಲಜಿಸ್ಟ್ಗಳ ಪ್ರಕಾರ, ಕೊರೊನಾದ ಮೂರನೇ ಅಲೆಯಿಂದ ಯುವ ಪೀಳಿಗೆಗಳಿಗೆ ಹೆಚ್ಚಿನ ಅಪಾಯವಿದೆ. ಜುಲೈ-ಆಗಸ್ಟ್ ತಿಂಗಳಿನಲ್ಲಿ ಕೊರೊನಾದ ಮೂರನೇ ಅಲೆಯ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಾವು ಅದನ್ನು ಸಮರ್ಥವಾಗಿ ಎದುರಿಸಲು ಸಿದ್ದರಾಗಬೇಕು" ಎಂದಿದ್ದಾರೆ.