ಬೆಂಗಳೂರು, ಮೇ.16 (DaijiworldNews/HR): ಕೊರೊನಾ ಕಾರ್ಯದಲ್ಲಿ ನಿರತರಾದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತಂತೆ ಕೂಡಲೇ ಶಿಕ್ಷಕವಾರು ವರದಿಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೊರೊನಾದಿಂದ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರ ವಯೋಮಾನ ಸಹಿತವಾಗಿ ಮೃತಪಟ್ಟ ಖಚಿತ ಕಾರಣಗಳೊಂದಿಗೆ ಅತಿ ಶೀಘ್ರದಲ್ಲೇ ತಮಗೆ ವರದಿ ಮಂಡಿಸಬೇಕೆಂದು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.
ಇನ್ನು ಉಪ ಚುನಾವಣೆಯಲ್ಲಿ 30ಕ್ಕೂ ಅಧಿಕ ಜನರಿಗೆಕೊರೊನಾ ಸೋಂಕು ತಗುಲಿತ್ತು. ಈ ಮೂಲಕ ಸೋಂಕಿಗೆ ತುತ್ತಾಗಿದ್ದಂತ 30ಕ್ಕೂ ಹೆಚ್ಚು ಶಿಕ್ಷಕರು ಕೊರೋನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು ಎಂಬುದಾಗಿ ತಿಳಿದು ಬಂದಿದ್ದು, ಇದೀಗ ಶಿಕ್ಷಣ ಸಚಿವರು ಸೋಂಕಿನಿಂದ ಮೃತಪಟ್ಟವರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.