ನವದೆಹಲಿ,ಮೇ 21(DaijiworldNews/MS): ಚಿಪ್ಕೊ ಚಳವಳಿ ಪ್ರಮುಖ ನಾಯಕ, ಖ್ಯಾತ ಪರಿಸರವಾದಿ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಸುಂದರ್ ಲಾಲ್ ಬಹುಗುಣ್ (94 ) ಅವರು ಕೋವಿಡ್ 19 ಸೋಂಕಿನಿಂದ ಶುಕ್ರವಾರ(ಮೇ 21) ರಿಷಿಕೇಶದ ಏಮ್ಸ್ ನಲ್ಲಿ ನಿಧನರಾಗಿದ್ದಾರೆ.

ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಸುಂದರ್ಲಾಲ್ ಬಹುಗುಣ ಅವರಿಗೆ ಕರೊನಾ ಸೋಂಕು ತಗುಲಿರುಬುದು ಖಚಿತವಾಗಿತ್ತು. ಮೇ 8ರಂದು ಉತ್ತರಾಖಂಡದ ರಿಷಿಕೇಶ್ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 12ರಂದು ಶ್ವಾಸಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿತ್ತು. ಮಧುಮೇಹ, ನ್ಯುಮೋನಿಯಾ ಕಾಯಿಲೆಯಿಂದಲೂ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಪರಿಸರವಾದಿ ಸುಂದರ್ ಲಾಲ್ ಬಹುಗುಣ ಅವರು ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹೋರಾಟ ನಡೆಸಿದ್ದರು. 1973ರಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆದ ಚಿಪ್ಕೋ ಚಳವಳಿಯನ್ನು ಮುನ್ನಡೆಸಿದ್ದರು. ತೆಹ್ರಿ ಅಣೆಕಟ್ಟು ವಿರುದ್ಧದ ಚಳವಳಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು.
ಸುಂದರ್ ಲಾಲ್ ಬಹುಗುಣ ರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927ರಂದು ಜನಿಸಿದ್ದು ಭಾರತದ ಆರಂಭಿಕ ಪರಿಸರವಾದಿ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ