ಮಡಿಕೇರಿ, ಮೇ.25 (DaijiworldNews/HR): ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿಯೊಬ್ಬಳು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದು ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್ ಪೋನ್ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿರುವುದು ವೈರಲ್ ಆಗಿದ್ದು, ಇದೀಗ ಕೊರೊನಾ ಕೇಂದ್ರದಿಂದ ಮೊಬೈಲ್ ಎಗರಿಸುತ್ತಿದ್ದಂತ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಬಾಲಕಿ ಹೃತೀಕ್ಷಾ
ಮಡಿಕೇರಿಯ ಕೊರೊನಾ ಆಸ್ಪತ್ರೆಯಲ್ಲಿ ಅನೇಕರ ಮೊಬೈಲ್ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು. ಅದರಲ್ಲಿಯೂ ಬಾಲಕಿ ಹೃತೀಕ್ಷಾ ಮನವಿಯ ಸುದ್ದಿಯಂತೂ ವೈರಲ್ ಆಗಿತ್ತು.
ಇನ್ನು ಸೋಮವಾರಪೇಟೆಯ ಬಿಜೆಪಿ ನಾಯಕ ಉಷಾ ತೇಜಸ್ವಿಯವರ ಮೊಬೈಲ್ ಕೂಡ ಮೇ.4ರಂದು ಕಳವಾಗಿದ್ದು, ಈ ಪ್ರಕರಣ ನಂತರ ತನಿಖೆ ಚುರುಕುಗೊಳಿಸಿದಂತ ಪೊಲೀಸರು ಬಿಜೆಪಿ ನಾಯಕಿಯ ಮೊಬೈಲ್ ಇಎಂಐ ಟ್ರಾಕ್ನಲ್ಲಿಟ್ಟಿದ್ದರು.
ಇಂತಹ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದಂತ ಆರೋಪಿ ಸುಮಂತ್ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇನ್ನು ಈತ ಈಗಾಗಲೇ ಅನೇಕ ಮೊಬೈಲ್ ಕದ್ದು, ಬೇರೆ ಅವರಿಗೆ ಮಾರಾಟ ಮಾಡಿರೋದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಈತನ ಬಳಿ ಮತ್ತಷ್ಟು ಕದ್ದ ಮೊಬೈಲ್ ಗಳಿರೋ ಸಾಧ್ಯತೆ ಇದ್ದು, ಆ ಬಗ್ಗೆ ತನಿಖೆಯನ್ನು ಡಿಸಿಐಬಿ ಪೊಲೀಸರು ಮುಂದುವರೆಸಿದ್ದಾರೆ.