ಮಂಡ್ಯ, ಮೇ.30 (DaijiworldNews/HR): ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗಾನಾ ರಾಣಾವತ್ ಅವರ ಬಾಡಿಗಾರ್ಡ್ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದ ಕುಮಾರ್ ಹೆಗ್ಡೆಯನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.

ಮುಂಬೈನಲ್ಲಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಕೈ ಕೊಟ್ಟು ಬೇರೆ ಹುಡುಗಿಯನ್ನು ಮುದುವೆಯಾಗಲು ಸಜ್ಜಾಗಿದ್ದನು ಎನ್ನಲಾಗಿದ್ದು, ಇದನ್ನು ಮಹಾರಾಷ್ಟ್ರ ರಾಜ್ಯದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಂದೇರಿ ಪೋಲೀಸರು ಆರೋಪಿ ಹೆಗ್ಗಡಹಳ್ಳಿ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದರು.
ಕುಮಾರ್ ಮುಂಬೈ ನಿಂದ ಕಳೆದ ಒಂದು ತಿಂಗಳ ಹಿಂದೆಯೇ ಲಾಕ್ಡೌನ್ ನೆಪದಲ್ಲಿ ತಮ್ಮ ಗ್ರಾಮವಾದ ಕಸಬಾ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿ ತಲೆ ಮರೆಸಿಕೊಂಡು ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದು, ಈ ವಿಚಾರವು ತಿಳಿಯುತ್ತಿಂದತೆ ಅನ್ಯಾಯಕ್ಕೆ ಒಳಗಾಗಿದ್ದ ಯುವತಿ ಅಂದೇರಿ ಪೋಲೀಸರಿಗೆ ದೂರು ನೀಡಿದ್ದಳು.
ಮುಂಬೈ ನಗರದ ಆಂದೇರಿ ಪೋಲೀಸ್ ಠಾಣೆಯ ಕ್ರೈಂ ವಿಭಾಗದ ಅಧಿಕಾರಿಗಳು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೋಲೀಸರ ಸಹಕಾರದೊಂದಿಗೆ ಆರೋಪಿ ಕುಮಾರ್ ಹೆಗ್ಡೆಯನ್ನು ಈತನನ್ನು ವಶಕ್ಕೆ ಪಡೆದಿದ್ದು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.