ಬೆಂಗಳೂರು, ಜೂ.01 (DaijiworldNews/HR): ನವಜಾತ ಶಿಶು ಕಳ್ಳತನ ವರ್ಷದ ಹಿಂದೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 35 ಸಾವಿರಕ್ಕೂ ಹೆಚ್ಚು ಮೊಬೈಲ್ ನಂಬರ್ಗಳನ್ನು ಟ್ರೇಸ್ ಮಾಡಿ, 800 ಜನರನ್ನು ವಿಚಾರಣೆಗೊಳಪಡಿಸಿದ ಬಳಿಕ ಆರೋಪಿ ಮನೋವೈದ್ಯೆಯನ್ನು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2020ರ ಮೇ 29ರಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳುವಾಗಿದ್ದು, ಮಗುವನ್ನು ಕಳವು ಮಾಡಿದ್ದ ಚಿಕ್ಕೋಡಿ ಮೂಲದ, ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಮನೋವೈದ್ಯೆ ಡಾ.ರಶ್ಮಿ (34)ಯನ್ನು ಬಂಧಿಸಿ ಮಗುವನ್ನು ವಶಕ್ಕೆ ಪಡೆದು ಪಾಲಕರ ಮಡಿಲು ಸೇರಿಸಲಾಗಿದೆ.
ಬಾಗಲಕೋಟೆ ಮೂಲದ ರೈತ ದಂಪತಿಗೆ ಕೆಲ ವರ್ಷಗಳ ಹಿಂದೆ ಬುದ್ಧಿಮಾಂದ್ಯ ಮಗು ಜನಿಸಿದ್ದು, ಆ ಮಗುವಿಗೆ ಚಿಕಿತ್ಸೆ ಕೊಡಿಸಲು ಪಾಲಕರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ತಂದಿದ್ದು, ಅಲ್ಲಿ ಮನೋವೈದ್ಯೆಯಾಗಿದ್ದ ಡಾ.ರಶ್ಮಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಇನ್ನೊಂದು ಮಗುವಿಗೆ ಪ್ರಯತ್ನಪಟ್ಟರೂ ಮಗುವಾಗಿರಲಿಲ್ಲ ಎಂಬುದನ್ನು ದಂಪತಿಗಳು ರಶ್ಮಿ ಬಳಿ ಹೇಳಿಕೊಂಡಿದ್ದರು. ಹಣದ ಆಸೆಗೆ ಬಿದ್ದ ವೈದ್ಯೆ ಬಾಡಿಗೆ ತಾಯಿ ಮೂಲಕ ನಿಮ್ಮದೇ ಮಗು ಕೊಡಿಸುವುದಾಗಿ ನಂಬಿಸಿ ದಂಪತಿಯ ಅಂಡಾಣು ಮತ್ತು ವೀರ್ಯಾಣು ಪಡೆದು ಅದನ್ನು ಬೇರೊಬ್ಬ ಮಹಿಳೆಯ ಗರ್ಭಕ್ಕೆ ಸೇರಿಸಿ ಮಗು ಬೆಳೆಸುವುದಾಗಿ ಹೇಳಿ 15 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.
ಇನ್ನು ಯಾವುದೇ ಐವಿಎಫ್ ಪ್ರಕ್ರಿಯೆ ನಡೆಸದೆ ಬಾಡಿಗೆ ತಾಯಿಯನ್ನೂ ತೋರಿಸದೆ ನಿಮ್ಮ ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ದಂಪತಿಗೆ ವೈದ್ಯೆಯು ಸುಳ್ಳು ಹೇಳಿ ಕಳುಹಿಸುತ್ತಿದ್ದರು. 9 ತಿಂಗಳು ಕಳೆದ ಬಳಿಕ ದಂಪತಿಗೆ ಮಗು ಕೊಡಿಸುವುದು ಅನಿವಾರ್ಯವಾದಾಗ ಹೆರಿಗೆ ಆಸ್ಪತ್ರೆಯಿಂದ ಮಗು ಕದಿಯುವ ಸಂಚು ರೂಪಿಸಿದ್ದಾರೆ.
ಗೂಗಲ್ನಲ್ಲಿ ಬೆಂಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ಮಾಹಿತಿ, ವಿಳಾಸ ತಿಳಿದುಕೊಂಡು 2020ರ ಮೇ 27, 28ರಂದು ವಿವಿಧ ಆಸ್ಪತ್ರೆಗಳಿಗೆ ತೆರಳಿ ಆಗತಾನೆ ಜನಿಸಿದ ಶಿಶು ಕದಿಯಲು ಪ್ರಯತ್ನ ನಡೆಸಿದ್ದರು. ಜೆಜೆ ಆರ್ ನಗರದ ನಿವಾಸಿ ನವೀದ್ ಪಾಷಾ ತನ್ನ ಪತ್ನಿ ಹುಸ್ನಾ ಭಾನು ಅವರನ್ನು ಹೆರಿಗೆಗೆಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 29ರಂದು ಬೆಳಗ್ಗೆ 7.51ಕ್ಕೆ ಇವರಿಗೆ ಗಂಡು ಮಗು ಜನಿಸಿದ್ದು, ಅದೇ ದಿನ ಬೆಳಗ್ಗೆ 11 ಗಂಟೆಗೆ ಈ ಆಸ್ಪತ್ರೆಗೆ ಬಂದ ರಶ್ಮಿ ನರ್ಸ್ ಬಳಿ ಹೋಗಿ ತನ್ನನ್ನು ಮಗುವಿನ ಪಾಲಕರ ಸಂಬಂಧಿ ಎಂದು ಹೇಳಿ ಮಗುವನ್ನು ಪಡೆದುಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ಬಳಿಕ ಕದ್ದ ಮಗುವನ್ನು ಬಾಗಲಕೋಟೆಯ ದಂಪತಿಗೆ ನಿಮ್ಮದೇ ಮಗು ಎಂದು ನಂಬಿಸಿ ಕೊಟ್ಟಿದ್ದರು.
ಈ ಬಗ್ಗೆ ಮಗುವನ್ನು ಕಳೆದುಕೊಂಡ ನವೀದ್ ಚಾಮರಾಜಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಇನ್ನು ವೈದ್ಯೆಯಿಂದ ಮಗುವನ್ನು ಪಡೆದುಕೊಂಡಿದ್ದ ದಂಪತಿ ತಮ್ಮ ಮಗುವೆಂದೇ ಭಾವಿಸಿದ್ದರು. ವೈದ್ಯೆ ರಶ್ಮಿಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಹಣದ ಆಮಿಷಕ್ಕೊಳಗಾಗಿ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ವಿಶೇಷ ತಂಡ ರಚಿಸಿ ಸ್ಥಳೀಯ ಸಿಸಿ ಕ್ಯಾಮರಾ, ಕರೆಗಳ ಪರಿಶೀಲನೆ ನಡೆಸಿದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಟವರ್ ಲೊಕೇಶನ್ ಮೂಲಕ ಕಳೆದೊಂದು ವರ್ಷದಿಂದ ಪೊಲೀಸರು 35 ಸಾವಿರಕ್ಕೂ ಹೆಚ್ಚು ಮೊಬೈಲ್ ನಂಬರ್ ಟ್ರಾಕ್ ಮಾಡಿ ಅನುಮಾನ ಬಂದ ಪ್ರತಿ ನಂಬರನ್ನೂ ಪರಿಶೀಲಿಸಿದಾಗ ಶಿಶು ಅಪಹರಣವಾದ ದಿನ ರಶ್ಮಿ ತಮ್ಮ ಮೊಬೈಲ್ನಲ್ಲಿ ಗೂಗಲ್ ಮೂಲಕ ಹಲವು ಹೆರಿಗೆ ಆಸ್ಪತ್ರೆಗಳ ಮಾಹಿತಿ ಕಲೆ ಹಾಕಿರುವ ಸುಳಿವು ಸಿಕ್ಕಿದ್ದು, ಈ ಆಧಾರದ ಮೇಲೆ ಇತ್ತೀಚೆಗೆ ಅವರ ಚಲನವಲನ ಪರಿಶೀಲಿಸಿ ಮೇ 29ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಇನ್ನು ಆಸ್ಪತ್ರೆಯ ಆಸುಪಾಸಿನಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ವೈದ್ಯೆ ರಶ್ಮಿ ಅವರ ಅಸ್ಪಷ್ಟ ಚಹರೆ ಪತ್ತೆಯಾಗಿದ್ದು, ರಶ್ನಿ ಮುಖಕ್ಕೆ ವೇಲ್ ಮುಚ್ಚಿಕೊಂಡಿದ್ದರು. ಪೊಲೀಸರು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದ ಅಸ್ಪಷ್ಟ ಮಹಿಳೆಯ ರೇಖಾ ಚಿತ್ರ ಬಿಡಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಿ ಮಾಹಿತಿ ನೀಡುವಂತೆ ಕೋರಿಕೊಂಡಿದ್ದರು.