ನವದೆಹಲಿ,ಜೂ.03 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಳೆದ ವರ್ಷ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ ಎಂದು ತಿಳಿದು ಬಂದದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ವಿನೀತ್ ಸರನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿದದು, ಹೈಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ ಉನ್ನತಮಟ್ಟದ ಸಮಿತಿಯು ಅನುಮತಿ ನೀಡದ ಹೊರತು, ಹತ್ತು ವರ್ಷಗಳ ಅನುಭವವಿರುವ ಯಾವುದೇ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಬಾರದು ಎಂಬ ವಿನೋದ್ ದುವಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇನ್ನು ವಾಕ್ ಸ್ವಾತಂತ್ರ್ಯದ ರಕ್ಷಣೆ ಮತ್ತು ಮಾಧ್ಯಮ ಸಿಬ್ಬಂದಿಯ ಅಭಿವ್ಯಕ್ತಿಯ ವಿಷಯದಲ್ಲಿ, ಪ್ರತಿಯೊಬ್ಬ ಪತ್ರಕರ್ತನಿಗೆ ಕೇದಾರ್ ನಾಥ್ ಸಿಂಗ್ ತೀರ್ಪಿನಡಿಯಲ್ಲಿ ರಕ್ಷಣೆ ಪಡೆಯಲು ಅರ್ಹತೆ ಇದೆ ಎಂದು ನ್ಯಾಯಾಲಯ ಹೇಳಿತು.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕಳೆದ ವರ್ಷ ವಿನೋದ್ ದುವಾ ಅವರು ಪ್ರಧಾನಿ ನರೇಂದ್ರ ಮೋದಿ ಕುರಿತು ನಡೆಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಬಿಜೆಪಿಯ ಸ್ಥಳೀಯ ಮುಖಂಡರೊಬ್ಬರು ದುವಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.