ಬೆಂಗಳೂರು, ಜೂ 3 (DaijiworldNews/MS): ಜುಲೈ 7ರಿಂದ ಪಿಯು ಪರೀಕ್ಷೆ ಎಂಬ ಸಂದೇಶವುಳ್ಳ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಅವರ ನಕಲಿ ಟ್ವೀಟ್ ನ ಸ್ಕ್ರೀನ್ ಶಾಟ್ ಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಇದು ವೈರಲ್ ಆದ ಹಿನ್ನಲೆಯಲ್ಲಿ ಉನ್ನತ ಶಿಕ್ಷಣ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.

"ಇದು ನಕಲಿ ಟ್ವೀಟ್ ಆಗಿದ್ದು, ಕಿಡಿಗೇಡಿಗಳು ನಕಲಿ ಟ್ವೀಟ್ ಮಾಡಿದ್ದಾರೆ. ಪಿಯು ಪರೀಕ್ಷೆ ಕುರಿತು ನಾನು ಯಾವುದೇ ನಿರ್ಧಾರ ಘೋಷಿಸಿಲ್ಲ " ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಕಲಿ ಟ್ವೀಟ್ ನಲ್ಲಿ " ಶಿಕ್ಷಣ ತಜ್ಞರ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಚರ್ಚೆ ಮಾಡಿದ ಬಳಿಕ ಸರ್ಕಾರ ಜುಲೈ 7 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ೧೨೦ ನಿಮಿಷಗಳ ಅವಧಿಗೆ ಇಳಿಸಲಾಗಿದೆ "ಎಂದಿದ್ದು ಇದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಎಂಬ ಖಾತೆಯಿಂದ ಟ್ವೀಟ್ ಆಗಿದೆ. ಆದರೆ ಈ ಟ್ವಿಟರ್ ಅಕೌಂಟ್ ಡಾ.ಅಶ್ವತ್ಥ್ ನಾರಾಯಣ ಅವರ ಅಧಿಕೃತ ಖಾತೆಯಲ್ಲ. ನಕಲಿ ಖಾತೆ ಸೃಷ್ಟಿಸಿ ಈ ಟ್ವೀಟ್ ಮಾಡಲಾಗಿದ್ದು ವಿದ್ಯಾರ್ಥಿಗಳೂ, ಪಾಲಕರು ಈ ವದಂತಿಯನ್ನು ನಂಬುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ನಾನು ಪರೀಕ್ಷೆಯನ್ನು ನಡೆಸುವ ಬಗ್ಗೆ ಯಾವುದೇ ಚರ್ಚೆಯಲ್ಲಿ , ಸಭೆಯಲ್ಲಿ ಭಾಗವಹಿಸಿಲ್ಲ. ಸಂಬಂಧಪಟ್ಟ ಇಲಾಖೆ ಈ ಕುರಿತು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹರಿದಾಡುತ್ತಿರುವ ಯಾವುದೇ ಹೇಳಿಕೆಗಳು ಸತ್ಯಕ್ಕೆ ದೂರ. ಅಂತಹ ಯಾವುದೇ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಪ್ರತ್ಯೇಕ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.