ಯಾದಗಿರಿ, ಜೂ 12 (DaijiworldNews/PY): "ದೆಹಲಿಗೆ ಹೋದವರೆಲ್ಲಾ ಸಿಎಂ ಬದಲಾವಣೆಗೆ ಹೋಗುತ್ತಾರೆಯೇ?. ಓರ್ವ ರಾಜಕಾರಣಿ ದೆಹಲಿಗೆ ಹೋಗಿ ಬಂದಾಗಲೂ ಒಬ್ಬ ಸಿಎಂ ಆಗಿ ಬದಲಾವಣೆ ಆಗಬೇಕು. ದೆಹಲಿಗೆ ಹೋಗುವುದು ಅವರ ವೈಯಕ್ತಿಕ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟುವ ಅವಶ್ಯಕತೆ ಇಲ್ಲ" ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.

ಯಾದಗಿರಿ ಸರ್ಕಿಟ್ ಹೌಸ್ನಲ್ಲಿ ಮಾತನಾಡಿದ ಅವರು, "ನಮ್ಮ ಪಕ್ಷದ ಕೇಂದ್ರ ಸ್ಥಾನ ದೆಹಲಿ. ಹಾಗಾಗಿ ದೆಹಲಿಗೆ ಯಾರೂ ಹೋಗಬಾರದು ಎಂದು ಕಡಿವಾಣ ಹಾಕಲು ಆಗುತ್ತಾ?. ಹಾಗಾದರೆ ಓರ್ವ ರಾಜಕಾರಣಿ ಕೇಂದ್ರ ಸ್ಥಾನಕ್ಕೆ ತೆರಳಬಾರದಾ?" ಎಂದು ಶಾಸಕ ಅರವಿಂದ್ ಬೆಲ್ಲದ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇನ್ನೂ ಎರಡು ವರ್ಷ ಕೂಡಾ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಮುಂಬರುವ ಚುನಾವಣೆ ಕೂಡಾ ಬಿಎಸ್ವೈ ಅವರ ನಾಯಕತ್ವದಲ್ಲೇ ನಡೆಯುತ್ತದೆ" ಎಂದಿದ್ದಾರೆ.
ಇನ್ನು ದೆಹಲಿ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಅರವಿಂದ್ ಬೆಲ್ಲದ್ ಅವರು, "ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಾನು ದೆಹಲಿಗೆ ಭೇಟಿ ನೀಡಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ರಾಜಕೀಯ ಬೆಳವಣಿಗೆಗಳ ಚರ್ಚೆ ನಡೆಸಲು ದೆಹಲಿ ಬಂದಿದ್ದಾರೆ ಎನ್ನುವ ರೀತಿಯಲ್ಲಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಬಗ್ಗೆ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು. ಈ ಬಗ್ಗೆ ವದಂತಿ ಬೇಡ" ಎಂದಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಅವರು ಶುಕ್ರವಾರ ರಾತ್ರಿ ದೆಹಲಿಗೆ ಪಯಣ ಬೆಳೆಸಿದ್ದು, ದೆಹಲಿಯ ಖಾಸಗಿ ಹೋಟೆಲ್ವೊಂದರಲ್ಲಿ ತಂಗಿದ್ದಾರೆ. ಆದರೆ, ನಾನೇ ಮುಂದಿನ ಸಿಎಂ ಎಂದು ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ದೆಹಲಿಗೆ ತೆರಲಿರುವುದು ಕುತೂಹಲ ಮೂಡಿಸಿತ್ತು.