ಬೆಂಗಳೂರು, ಜು.02 (DaijiworldNews/HR): ಕೋಟ್ಯಂತರ ರೂಪಾಯಿ ಹಣವನ್ನು ಸಚಿವರ ಹೆಸರಲ್ಲಿ ವಸೂಲಿ ಮಾಡಿರುವ ಆರೋಪದ ಮೇಲೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜು ಅಲಿಯಾಸ್ ರಾಜಣ್ಣ (35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇದೀಗ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ.

ಬಳ್ಳಾರಿ ನಿವಾಸಿಯಾಗಿರುವ ರಾಜಣ್ಣ ವಿರುದ್ಧ ವಿಜಯೇಂದ್ರ ನೀಡಿದ್ದ ದೂರು ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿದ್ದು, ಈಗ ಬಿಡುಗಡೆ ಮಾಡಲಾಗಿದೆ. ವಿಚಾರಣೆ ಅಗತ್ಯವಿದ್ದರೆ ಮತ್ತೊಮ್ಮೆ ಬರುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತನಗೆ ಆಪ್ತರೆಂದು ರಾಜಣ್ಣ ಹೇಳಿಕೊಳ್ಳುತ್ತಿದ್ದು, ವಿಜಯೇಂದ್ರ ಮೂಲಕವೇ ಸರ್ಕಾರದ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎನ್ನಲಾಗಿದೆ.
ಉದ್ಯಮಿಯೊಬ್ಬರ ಜೊತೆ ಆರೋಪಿ ರಾಜಣ್ಣ ನಡೆಸಿದ್ದ ಮೊಬೈಲ್ ಸಂಭಾಷಣೆ ಇತ್ತೀಚೆಗೆ ವೈರಲ್ ಆಗಿದ್ದು, ವಿಜಯೇಂದ್ರ ಹೆಸರು ಪ್ರಸ್ತಾಪಿಸಿದ್ದ ಆರೋಪಿ, 'ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಅವರಿಗಿಂತ ಪುತ್ರನದ್ದೇ ಹೆಚ್ಚು ಮಾತು ನಡೆಯುತ್ತದೆ. ಹಣ ಕೊಟ್ಟರೆ, ವಿಜಯೇಂದ್ರ ಅವರ ಮೂಲಕವೇ ನಿಮ್ಮ ಕೆಲಸ ಮಾಡಿಸುತ್ತೇನೆ ಎಂಬುದಾಗಿ ತಿಳಿಸಿದ್ದ. ಅದನ್ನು ನಂಬಿ ಉದ್ಯಮಿ ಹಣವನ್ನೂ ಕೊಟ್ಟಿರುವ ಮಾಹಿತಿ ಇದೆ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.