ಬೆಂಗಳೂರು, ಜು 02 (DaijiworldNews/PY): "ಸಚಿವರುಗಳು ತಮ್ಮ ಸಹಾಯಕರ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ, ಶ್ರೀರಾಮುಲು ಅವರು ಕೂಡಲೇ ರಾಜೀನಾಮೆ ನೀಡಬೇಕು. ಬಿಜೆಪಿ ನಡೆಸುತ್ತಿರುವುದು ಸರ್ಕಾರವಲ್ಲ, ಮಾಫಿಯಾ!" ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ವಂಚನೆ ಪ್ರಕರಣದಲ್ಲಿ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನ ಬಂಧನದಿಂದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪ್ತಿಯಾಗಿರುವುದಕ್ಕೆ ಮತ್ತೊಂದು ನಿದರ್ಶನ. ಸಚಿವರುಗಳು ತಮ್ಮ ಸಹಾಯಕರ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ, ಶ್ರೀರಾಮುಲು ಅವರು ಕೂಡಲೇ ರಾಜೀನಾಮೆ ನೀಡಬೇಕು, ಇದರಲ್ಲಿ ಸಚಿವರ ಪಾತ್ರದ ಬಗ್ಗೆ ತನಿಖೆ ನಡೆಯಬೇಕು" ಎಂದು ಆಗ್ರಹಿಸಿದೆ.
"ಬಿಜೆಪಿ ಸರ್ಕಾರದಲ್ಲಿ ಸಚಿವರದ್ದು ಒಂದು ಬಗೆಯ ಭ್ರಷ್ಟಾಚಾರವಾದರೆ, ಅವರ ಸಹಾಯಕರ ಮೂಲಕ ಮತ್ತೊಂದು ಬಗೆಯ ಭ್ರಷ್ಟಾಚಾರ ನಡೆಯುತ್ತಿದೆ. ಆರ್. ಅಶೋಕ್ ಪಿಎ - ಲಂಚ ಪ್ರಕರಣ, ಸತೀಶ್ ರೆಡ್ಡಿ ಪಿಎ - ಬೆಡ್ ಬ್ಲಾಕಿಂಗ್ ಹಗರಣ, ಶ್ರೀರಾಮುಲು ಪಿಎ - ವಂಚನೆ ಹಗರಣ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿಯಾಗಿರುವುದಕ್ಕೆ ಸಾಕ್ಷಿ" ಇದು ಎಂದಿದೆ.
"ಸಚಿವ ಶ್ರೀರಾಮುಲು ಮನೆ ದಂಧೆಕೋರರ ಅಡ್ಡೆಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಕಳೆದ ವರ್ಷ ವೈದ್ಯಕೀಯ ಉಪಕರಣ ಖರೀದಿ ವಿಚಾರದಲ್ಲಿ ಸಚಿವರ ಮನೆಯಲ್ಲಿ ಹತ್ಯೆಯೊಂದು ನಡೆದ ವಿಷಯ ಹೊರಬಂದು, ಬಂದಷ್ಟೇ ವೇಗದಲ್ಲಿ ಮುಚ್ಚಿಹೋಗಿತ್ತು. ಈಗ ಅವರ ಆಪ್ತನ ಬಹುದೊಡ್ಡ ವಂಚನೆ ಜಾಲ ಬಯಲಾಗಿದೆ. ಬಿಜೆಪಿ ನಡೆಸುತ್ತಿರುವುದು ಸರ್ಕಾರವಲ್ಲ, ಮಾಫಿಯಾ!" ಎಂದು ತಿಳಿಸಿದೆ.
"ವಿಜಯೇಂದ್ರ ಹೆಸರು ಹೇಳಿಕೊಂಡು ವರ್ಗಾವಣೆ ಮಾಡಿಸುತ್ತೇನೆ, ಗುತ್ತಿಗೆ ಕೊಡಿಸುತ್ತೇನೆ, ಕೆಲಸ ಕೊಡಿಸುತ್ತೇನೆ ಎಂಬ ಆಮಿಷಗಳನ್ನು ಒಬ್ಬ ಸಚಿವರ ಸಹಾಯಕ ಸುಮ್ಮನೆ ಹೇಳಲಾಗದು, ಹಣ ಹಂಚಿಕೆಯ ವೈಮಸಿನಿಂದ ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ಈ ವಂಚನೆ ಜಾಲದಲ್ಲಿ ಬಿ.ವೈ.ವಿಜಯೇಂದ್ರ ಅವರ ಪಾತ್ರವೂ ಇರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು" ಎಂದು ಒತ್ತಾಯಿಸಿದೆ.
"ಬಿಜೆಪಿ ಆಡಳಿತದಲ್ಲಿ, ಚಿತೆಗಳು ಉರಿಯುತ್ತವೆ, ಅಡುಗೆ ಒಲೆಗಳು ಆರುತ್ತವೆ! ಗ್ಯಾಸ್ ಬೆಲೆ ಕಳೆದ 6 ತಿಂಗಳಲ್ಲಿ ಸುಮಾರು 140 ರೂಪಾಯಿಗಳಷ್ಟು ಏರಿಕೆ ಕಂಡಿದೆ. ರಾಜ್ಯದ ಹಲವೆಡೆ ಪೆಟ್ರೋಲ್ 104 ರೂಪಾಯಿಗೂ ಹೆಚ್ಚಾಗಿದೆ, ಬ್ಯಾಂಕ್ ವ್ಯವಹಾರಗಳು ದುಬಾರಿಯಾಗಿದೆ. ಬಡ ಹಾಗೂ ಮದ್ಯಮವರ್ಗದ ಜನ ಬದುಕಲೇಬಾರದು" ಎಂದು ಬಿಜೆಪಿ ನಿರ್ಧರಿಸಿದಂತಿದೆ ಎಂದು ತಿಳಿಸಿದೆ.