ನವದೆಹಲಿ, ಜು.02 (DaijiworldNews/HR): ಕೇಂದ್ರ ಸರ್ಕಾರದ ಕೊರೊನಾ ನಿರ್ವಹಣೆಯ ಕುರಿತು ಪದೇ ಪದೇ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, "ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಈ ಸಂಕಷ್ಟದ ದಿನಗಳ ಮಟ್ಟಿಗಾದರೂ ರಾಜಕೀಯ ಮಾಡುವುದನ್ನು ನಿಲ್ಲಿಸಿ. ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಇಂತಹ ಕೆಳ ಮಟ್ಟದ ರಾಜಕಾರಣ ಮಾಡಬೇಡಿ" ಎಂದು ವಾಗ್ದಾಳಿ ಮಾಡಿದ್ದಾರೆ.
ಇನ್ನು "ಜುಲೈನಲ್ಲಿ 12 ಕೋಟಿ ಲಸಿಕೆ ಪ್ರಮಾಣ ಲಭ್ಯವಿರಲಿದ್ದು, 15 ದಿನಗಳ ಹಿಂದೆಯೇ ರಾಜ್ಯಗಳಿಗೆ ಸರಬರಾಜು ಬಗ್ಗೆ ಮಾಹಿತಿ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳು ಪ್ರತ್ಯೇಕವಾಗಿ ಸರಬರಾಜು ಮಾಡಲಾಗುತ್ತದೆ. ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಿಮ್ಮ ಕೀಳು ರಾಜಕೀಯವು ಸರಿಯಲ್ಲ ಎಂದು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.