ನವದೆಹಲಿ, ಜು 03 (DaijiworldNews/PY): "ಕೊರೊನಾದ ಎರಡನೇ ಅಲೆ ಇನ್ನೂ ಹೋಗಿಲ್ಲ. ಈ ಹಿನ್ನೆಲೆ ನಿರ್ಬಂಧ ಸಡಿಲಿಸುವಾಗ ಎಚ್ಚರವಿರಲಿ" ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

"71 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಹಾಗಾಗಿ ಪ್ರಕರಣಗಳ ಹೆಚ್ಚಿರುವ ಜಿಲ್ಲೆಯಲ್ಲಿ ರಾಜ್ಯ ಸರ್ಕಾರಗಳು ಜಾಗ್ರತೆ ವಹಿಸಬೇಕು" ಎಂದು ಕೇಂದ್ರ ಅರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಪ್ರಕರಣ ಹೆಚ್ಚಿರುವ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ತನ್ನ ತಜ್ಞರ ತಂಡವನ್ನು ಕಳುಹಿಸಿದೆ. ಈ ತಂಡದಲ್ಲಿ ಇಬ್ಬರು ತಜ್ಞ ವೈದ್ಯರಿದ್ದು, ಆಯಾ ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿವೆ.
ಕೇಂದ್ರದ ನಿಯಮದ ಪ್ರಕಾರ, "ವಾರದ ಸರಾಸರಿಯಲ್ಲಿ ಅಧಿಕ ಪ್ರಕರಣಗಳು ಇರುವ ಜಿಲ್ಲೆಗಳನ್ನು ಗುರುತಿಸಬೇಕು. ಹಾಸಿಗೆ ಲಭ್ಯತೆ ಸೇರಿದಂತೆ ಆಸ್ಪತ್ರೆಗಳ ಮೂಲಸೌಕರ್ಯಗಳ ಬಗ್ಗೆ ಗಮನವಹಿಸಬೇಕು. ಯಾವ ಜಿಲ್ಲೆಗಳಲ್ಲಿ ಅಧಿಕ ಪ್ರಕರಣಗಳು, ಎಲ್ಲಿ ಹಾಸಿಗೆಗಳು ಭರ್ತಿಯಾಗಿವೆ ಎನ್ನುವುದರ ಬಗ್ಗೆ ಗಮನವಿರಲಿ, ನಿರ್ಬಂಧಗಳು 14 ದಿನಗಳವರೆಗೆ ಮುಂದುವರಿಯಬೇಕು. ಇನ್ನು ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಆಗಿ ನೇಮಕ ಮಾಡಬೇಕು. ಪರೀಕ್ಷೆ, ಪತ್ತೆ, ಚಿಕಿತ್ಸೆ ಹಾಗೂ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಬೇಕು" ಎಂದು ತಿಳಿಸಿದೆ.
ಕೋವಿನ್ ಮೂಲಕ ನೋಂದಣಿ ಮಾಡಿಸಿಕೊಂಡು ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ನೇರವಾಗಿ ಕೇಂದ್ರಕ್ಕೆ ತೆರಳಿಯೂ ಕೂಡಾ ಲಸಿಕೆ ಪಡೆದುಕೊಳ್ಳಬಹುದು. ಈ ಬಗ್ಗೆ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.