ವಿಜಯವಾಡ, ಜು 03 (DaijiworldNews/PY): ಮನೆಯಲ್ಲೇ ಕುಳಿತು ಯೂಟ್ಯೂಬ್ ವೀಕ್ಷಿಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪೂರ್ವ ಗೋದಾವರಿಯ ಅನಪಾರ್ಥಿ ನಿವಾಸಿ ಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ.
ನಕಲಿ ನೋಟುಗಳನ್ನು ಹೊಂದಿರುವ ಆರೋಪದ ಮೇರೆಗೆ ಗೊಟಿಮಕ್ಕಲ ರವಿಶಂಕರ್, ನಾಗ ಮಲ್ಲೇಶ್ವರಿ, ದುಲಾಮ್ ಸಾಯಿ, ಪ್ರದೀಪ್, ಭಿಮಾವರಪು ಯಾಗ್ನ ಎಂಬವರ ವಿರುದ್ದ ಜೂನ್ 23ರಂದು ಇಬ್ರಾಹಿಂಪಟ್ಟಣಂ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವಿಚಾರಣೆಯ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದರು. ಈ ಮಾಹಿತಿಯ ಆಧಾರದ ಮೇಲೆ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ನೋಟುಗಳನ್ನು ಹೇಗೆ ತಯಾರಿಸುವುದು ಎನ್ನುವುದನ್ನು ಕೃಷ್ಣ ರೆಡ್ಡಿ ಯೂಟ್ಯೂಬ್ಗಳ ವಿಡಿಯೋ ನೋಡಿ ತಿಳಿದಿದ್ದ. ಅದರಂತೆ ಆತ ಮನೆಯಲ್ಲಿ ಕುಳಿತು ನಕಲಿ ಹಣ ಮುದ್ರಿಸುತ್ತಿದ್ದ. ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ರೆಡ್ಡಿಯ ಮನೆಯಲ್ಲಿದ್ದ ಒಂದು ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ಕಟ್ಟರ್ ಅನ್ನು ಪೊಲೀಶರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮನೆಯಲ್ಲೇ ಕುಳಿತು 200 ಹಾಗೂ 500 ರೂ. ನೋಟುಗಳನ್ನು ಮುದ್ರಿಸುತ್ತಿದ್ದ. ಸ್ಟೇಷನರಿ ಶಾಪ್ನಲ್ಲಿ ಸಿಗುತ್ತಿದ್ದ ಪೇಪರ್ನಿಂದ ನೋಟು ಪ್ರಿಂಟ್ ಮಾಡುತ್ತಿದ್ದು, ನಂತರ ನಕಲಿ ನೋಟನ್ನು ಒರಿಜಿನಲ್ ನೋಟಿನ ಗಾತ್ರದಲ್ಲೇ ಕತ್ತರಿಸುತ್ತಿದ್ದ. ಇದರಿಂದ ಜನರಿಗೆ ಅದನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.
ಆರೋಪಿ ನಕಲಿ ನೋಟು ತಯಾರಿಕೆಯಿಂದಲೇ ಸುಮಾರು 2 ಕೋಟಿ. ರೂ. ಸಂಪಾದಿಸಿದ್ದ ಎಂದು ತಿಳಿದುಬಂದಿದೆ.
ಪ್ರಮುಖ ಆರೋಪಿ ಹಾಗೂ ಇತರರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.