ನವದೆಹಲಿ, ಜು.03 (DaijiworldNews/HR): ದೇಶದ ವ್ಯಾಪಾರಿ ಸಮುದಾಯದ ಸಬಲೀಕರಣಕ್ಕೆ ನಮ್ಮ ಬಿಜೆಪಿ ಸರ್ಕಾರವು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ನಮ್ಮ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದ ಕೋಟ್ಯಂತರ ವ್ಯಾಪಾರಿಗಳಿಗೆ ಹಣಕಾಸು ಸೌಲಭ್ಯ ಪಡೆಯುವುದು ಸುಲಭವಾಗಲಿದೆ. ಅನೇಕ ಪ್ರಯೋಜನಗಳನ್ನು ಪಡೆಯುವ ಮೂಲಕ ವ್ಯವಹಾರ ಹೆಚ್ಚಿಸಲು ನೆರವಾಗಲಿದೆ. ವ್ಯಾಪಾರಸ್ಥರ ಸಬಲೀಕರಣಕ್ಕೆ ನಾವು ಬದ್ಧರಾಗಿದ್ದೇವೆ" ಎಂದಿದ್ದಾರೆ.
ಇನ್ನು ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯವನ್ನು ಕೂಡ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮದ ವ್ಯಾಪ್ತಿಗೆ ತರಲಾಗಿದ್ದು, ಇದು ವ್ಯಾಪಾರಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯವನ್ನು ಎಂಎಸ್ಎಂಇ ಉದ್ಯಮದ ವ್ಯಾಪ್ತಿಗೆ ತರಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಘೋಷಿಸಿದ್ದು, ಇದರಿಂದಾಗಿ ಚಿಲ್ಲರೆ ಹಾಗೂ ಸಗಟು ವ್ಯಾಪಾರ ವಲಯದವರಿಗೆ ಕೂಡ ಆರ್ಬಿಐ ಮಾರ್ಗಸೂಚಿ ಅನ್ವಯ ಆದ್ಯತೆಯ ಮೇರೆಗೆ ಸಾಲ ಲಭ್ಯವಾಗಲಿದೆ.