ಚಿಕ್ಕಬಳ್ಳಾಪುರ, ಜು 03 (DaijiworldNews/PY): ಹೆಣ್ಣೆಂಬ ಕಾರಣಕ್ಕೆ ನವಜಾತ ಶಿಶುವೊಂದನ್ನು ಸ್ವತಃ ತಾಯಿಯೇ ಶೌಚಾಲಯದ ಕಿಟಕಿಗೆ ನೇಣುಬಿಗಿದು ಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ.

ಸಾಂದರ್ಭಿಕ ಚಿತ್ರ
ಶನಿವಾರ ಬೆಳಗ್ಗೆ ಶೌಚಾಲಯ ಶುಚಿಗೊಳಿಸಲು ಬಂದ ಸಿಬ್ಬಂದಿ ಇದನ್ನು ಗಮನಿಸಿದ್ದು, ಕೂಡಲೇ ಈ ವಿಚಾರವನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮಗುವಿಗಡ ಆಕ್ಸಿಜನ್ ನೀಡಿ ಬದುಕಿಸಲು ಯತ್ನಿಸಿದ್ದು, ಆ ವೇಳೆಗಾಗಲೇ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
"ಬೆಳಗ್ಗೆ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಶೌಚಾಲಯದ ಬಾಗಿಲು ಮುಚ್ಚಿದ್ದ ಕಾರಣ, ಯಾರೋ ಇದ್ದಾರೆ ಎಂದು ಸಿಬ್ಬಂದಿ ಸುಮ್ಮನಾಗಿದ್ದಾರೆ. ಕೆಲ ಸಮಯ ಬಿಟ್ಟು ನೋಡಿದ ವೇಳೆಯೂ ಬಾಗಿಲು ಮುಚ್ಚಿತ್ತು. ಬಳಿಕ ಪರಿಶೀಲಿಸಿದಾಗ, ನವಜಾತ ಶಿಶು ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. ತಕ್ಷಣವೇ ಆಕ್ಸಿಜನ್ ನೀಡಿ ಚಿಕಿತ್ಸೆಗೆ ಮುಂದಾಗಿದ್ದು, ಆದರೆ, ಆ ವೇಳೆ ಮಗು ಪ್ರಾಣ ಬಿಟ್ಟಿತ್ತು" ಎಂದು ಆಸ್ಪತ್ರೆಯ ವೈದ್ಯ ಡಾ. ಜಯರಾಂ ಮಾಹಿತಿ ನೀಡಿದ್ದಾರೆ.
ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದು, ಆಸ್ಪತ್ರೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ.