ಬೆಂಗಳೂರು,ಜು.03 (DaijiworldNews/HR): "ಕಾಂಗ್ರೆಸ್ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ ಇದ್ದವರು ಯಾರೂ ಬೇಕಾದರೂ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಸೇರ್ಪಡೆ ಕುರಿತು ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಿಜೆಪಿಗೆ ಹೋದವರು ನಮ್ಮನ್ನು ಸಂಪರ್ಕಿಸಿಲ್ಲ. ಆದರೆ ಅವರಲ್ಲಿ ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಗೆ ಅರ್ಜಿ ಹಾಕಬಹುದು. ಸ್ಥಳೀಯ ನಾಯಕರು ಒಪ್ಪಿದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು" ಎಂದರು.
"ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಸೇರಬಹುದು, ಈ ಬಗ್ಗೆ ಅರ್ಜಿ ಹಾಕಲಿ. ಸ್ಥಳೀಯ ನಾಯಕರು ಸೇರಿ ಎಲ್ಲರೂ ಪರಿಶೀಲಿಸಿ ಅವರ ಸೇರ್ಪಡೆ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಯಾವುದೇ ಗೊಂದಲ ಆಗಬಾರದು ಅದಕ್ಕಾಗಿ ಎಲ್ಲರ ಒಪ್ಪಿಗೆಯೊಂದಿಗೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ" ಎಂದಿದ್ದಾರೆ.
ಇನ್ನು "ಬಿಜೆಪಿಗೆ ಸೇರ್ಪಡೆಯಾದ 17 ಜನರಲ್ಲಿ ಯಾರೂ ಅರ್ಜಿ ಹಾಕಿಲ್ಲ, ಬೇರೆಯವರು ಇಬ್ಬರು ಹಾಕಿದ್ದಾರೆ. ಹಾಗಾಗಿ ಯಾರೂ ಬೇಕಾದರೂ ಅರ್ಜಿ ಹಾಕಬಹುದು" ಎಂದು ಹೇಳಿದ್ದಾರೆ.