ಬೆಂಗಳೂರು, ಜು.03 (DaijiworldNews/HR): ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ 17 ಜನ ಮಾತ್ರವಲ್ಲದೇ ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, "ನಾನು ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡುತ್ತೇನೆ. ಅವರು ಹೇಳಿದ್ದು ಯಾರು ಬೇಕಾದರೂ ಬರಬಹುದು ಎಂದು 14 ಜನರ ಬಗ್ಗೆ ಹೇಳಿಕೆ ನೀಡಿಲ್ಲ. ಪಕ್ಷಕ್ಕೆ ಮೋಸ ಮಾಡಿ ಹೋದ 14 ಜನರನ್ನು ಪ್ರಳಯ ಆದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಬಗ್ಗೆ ನಾನು ಈ ಹಿಂದೆ ಸ್ಪಷ್ಟಪಡಿಸಿದ್ದೇನೆ. ಸದನದಲ್ಲಿ ನಡೆದ ಕಲಾಪದ ವೇಳೆ ಕೂಡ ಹೇಳಿದ್ದೇನೆ" ಎಂದರು.
ಇನ್ನು "ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು ಅರ್ಜಿ ಹಾಕಲಿ ಪರಿಶೀಲಿಸುತ್ತೇವೆ. ಪಕ್ಷ ಬಿಟ್ಟ 14 ಜನ ಬರಲಿ ಎಂದು ಹೇಳಿಕೆ ನೀಡಿಲ್ಲ. ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರಲು ಇಷ್ಟ ಇರುವವರು ಅರ್ಜಿ ಹಾಕಿದರೆ ಪರಿಶೀಲಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ ಅಷ್ಟೇ" ಎಂದು ತಿಳಿಸಿದರು.