ಬೆಂಗಳೂರು, ಜು 03 (DaijiworldNews/PY): "ವಂಚನೆ ಪ್ರಕರಣದಲ್ಲಿ ಶ್ರೀರಾಮುಲು ಅವರ ಪಿಎ ಬಂಧಿಸಿದ ವೇಗದಲ್ಲಿಯೇ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿ. ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ" ಎಂದು ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ವಂಚನೆ ಪ್ರಕರಣದಲ್ಲಿ ಶ್ರೀರಾಮುಲು ಅವರ ಪಿಎ ಬಂಧಿಸಿದ ವೇಗದಲ್ಲಿಯೇ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿ. ಎಫ್ಐಆರ್ ಆಗಿದ್ದರೂ ಕೋರ್ಟಿಗೆ ಹಾಜರುಪಡಿಸದೆ ಬಿಡುಗಡೆಗೊಳಿಸಿದ್ದು ಏಕೆ? ಪ್ರಭಾವ ಬೀರಿದ್ದು ಯಾರು? ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ" ಎಂದು ಆರೋಪಿಸಿದೆ.
"ಅರೆಸ್ಟ್ ಮಾಡಿ ಎಂದಾಗ ಅರೆಸ್ಟ್ ಮಾಡುವುದು, ಬಿಡುಗಡೆ ಮಾಡಿ ಎಂದಾಗ ಬಿಡುಗಡೆ ಮಾಡುವುದಕ್ಕೆ ಪೊಲೀಸರು ಬಿ.ವೈ ವಿಜಯೇಂದ್ರ ಮನೆಯ ಕಾಲಾಳುಗಳಂತಗಿದ್ದಾರೆಯೇ? ಎಫ್ಐಆರ್ ದಾಖಲಾಗಿದ್ದರೂ ಆರೋಪಿಯನ್ನ ಬಿಡುಗಡೆ ಮಾಡುವುದರ ಹಿಂದೆ ಭ್ರಷ್ಟ ಹಣದ "ಸೆಟಲ್ಮೆಂಟ್" ನಡೆದಿರುವಂತಿದೆ. ಬಸವರಾಜ್ ಬೊಮ್ಮಾಯಿ ಅವರೇ, ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಅನುಕೂಲಕ್ಕೆ ಇರುವುದೇ?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿ ಅಧಿಕಾರಿಗಳದ್ದು ಡೀಲಿಂಗ್, ಸಚಿವರದ್ದು ಡೀಲಿಂಗ್, ಸಚಿವರ ಪಿಎಗಳದ್ದೂ ಡೀಲಿಂಗ್! ಅಮಿತ್ ಶಾ ಅವರೇ, ನಿಮ್ಮ ಪಕ್ಷದ ಈ ಸರ್ಕಾರ ಎಷ್ಟು ಪರ್ಸೆಂಟ್ನದ್ದು ಸ್ವಲ್ಪ ಹೇಳಿ?!" ಎಂದು ಒತ್ತಾಯಿಸಿದೆ.